ಕುಶಾಲನಗರ, ಡಿ. ೨೦: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಶ್ರಯದಲ್ಲಿ ೩೮ನೇ ವರ್ಷದ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ ತಾ. ೨೩ ಮತ್ತು ೨೪ ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ನವನೀತ್ ಪೊನ್ನೇಟಿ ತಿಳಿಸಿದರು.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಪವಮಾನ ಹೋಮ ನಡೆಯಲಿದೆ. ತಾ. ೨೪ ರಂದು ೩೮ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ರಥಬೀದಿಯ ಆಂಜನೇಯ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಗೆ ಮಹಾಮಂಗಳಾರತಿ ನಂತರ ೧ ಗಂಟೆಗೆ ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ.

ಸಂಜೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯಮೆರವಣಿಗೆ ಏರ್ಪಡಿಸಲಾಗಿದೆ. ಸಂಜೆಯ ಶೋಭಾ ಯಾತ್ರೆಯಲ್ಲಿ ಕುಶಾಲನಗರದ ಹೆಚ್.ಆರ್.ಪಿ. ಕಾಲೋನಿ, ಜನತಾ ಕಾಲೋನಿ, ಗೋಪಾಲ್ ಸರ್ಕಲ್ ಸೇರಿದಂತೆ ನೆರೆಯ ಗುಡ್ಡೆಹೊಸೂರು, ಮಾದಾಪಟ್ಟಣ, ಬೈಚನಹಳ್ಳಿ, ಕೂಡಿಗೆ ಭಾಗದಿಂದ ಒಟ್ಟು ೮ ಉತ್ಸವ ಮಂಟಪಗಳು ಪಾಲ್ಗೊಳ್ಳಲಿವೆ. ಸುತ್ತಮುತ್ತಲ ಗ್ರಾಮಗಳಿಂದ ೨೫ ರಿಂದ ೩೦ ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಆಂಜನೇಯ ದೇವಾಲಯದಿಂದ ರಥಬೀದಿ ಮೂಲಕ ಬೈಚನಹಳ್ಳಿ ಮಾರಿಯಮ್ಮ ದೇವಾಲಯದವರೆಗೆ ಹನುಮಾನ್ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ವಿ.ಹೆಚ್. ಪ್ರಶಾಂತ್, ಸಹ ಕಾರ್ಯದರ್ಶಿ ಟಿ. ವಿನು, ಖಜಾಂಚಿ ಪ್ರವೀಣ್ ಓಂಕಾರ್, ಸಂಚಾಲಕ ಕೆ.ಎನ್. ಚಂದ್ರಶೇಖರ್ ಇದ್ದರು.