ಕುಶಾಲನಗರ, ಡಿ. ೨೧: ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯ ಸಮೀಪದಲ್ಲಿರುವ ಕಾಫಿ ತೋಟದಲ್ಲಿ ಶುಂಠಿ ಬೆಳೆಗೆ ಜಾಗ ಸಮತಟ್ಟು ಮಾಡುವ ನೆಪದಲ್ಲಿ ನೂರಾರು ಮರಗಳ ನಾಶ ಮಾಡಿರುವ ಪ್ರಕರಣ ಇದೀಗ ಜಿಲ್ಲೆಯಲ್ಲಿ ಎಲ್ಲೆಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಕ್ತಿ ಪತ್ರಿಕೆಯಲ್ಲಿ ಸಮಗ್ರ ವರದಿ ಪ್ರಕಟವಾದ ಬೆನ್ನಲ್ಲೇ ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಜನರು ಮಾತನಾಡತೊಡಗಿದ್ದಾರೆ.

ರಸ್ತೆಯಿಂದ ಕೂಗಳತೆ ದೂರದಲ್ಲಿ ಎರಡು ತಿಂಗಳಿನಿAದ ನೂರಾರು ಮರಗಳ ಹನನ, ಭಾರಿ ಯಂತ್ರೋಪಕರಣಗಳ ಓಡಾಟ, ಲಾರಿ ಟ್ರ‍್ಯಾಕ್ಟರ್ ಗಳಲ್ಲಿ ಟಿಂಬರ್ ಸಾಗಾಟ ಎಸ್ಟೇಟ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ೫೦ಕ್ಕೂ ಅಧಿಕ ಕಾರ್ಮಿಕರು ಈ ಬಗ್ಗೆ ಕನಿಷ್ಟ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾದ ಕೊಡಗು ಜಿಲ್ಲಾ ಅರಣ್ಯ ಸಂಚಾರಿದಳ ಅಧಿಕಾರಿ ಸಿಬ್ಬಂದಿಗಳು ಮತ್ತು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ತಂಡದ ಬಗ್ಗೆ ಸಂಶಯ ವ್ಯಕ್ತಗೊಂಡಿದೆ.

ಒಟ್ಟಾರೆ ತಮ್ಮ ಕರ್ತವ್ಯ, ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ನಿರ್ಲಕ್ಷö್ಯ ತಾಳಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ತವ್ಯ ನಿಮಿತ್ತ ಮಡಿಕೇರಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಟ್ರಾö್ಯಕ್ಟರೊಂದರಲ್ಲಿ ಟಿಂಬರ್ ಸಾಗಿಸುತ್ತಿದ್ದ ಪ್ರಕರಣ ಒಂದನ್ನು ಪತ್ತೆ ಹಚ್ಚಿದ್ದು ಇದರ ಬೆನ್ನು ಬಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದೇ ರೀತಿ ನೂರಾರು ಲಾರಿಗಳಷ್ಟು ಮರ ಈ ತೋಟದಿಂದ ಸಾಗಾಟವಾಗಿರುವ ಶಂಕೆ ವ್ಯಕ್ತಗೊಂಡಿದೆ.

ಕುಶಾಲನಗರ ಅರಣ್ಯ ವಲಯ ವ್ಯಾಪ್ತಿಯ ಆನೆಕಾಡು ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಸಂಪೂರ್ಣ ಮೌನ ವಹಿಸಿರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನುವುದು ತಿಳಿದುಬಂದಿದೆ.

ಇದೇ ಕಾಫಿ ತೋಟದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಭಾರಿ ಪ್ರಮಾಣದ ಬೀಟೆಮರದ ಅಕ್ರಮ ಸಾಗಾಟ ಸಂದರ್ಭ ವಾಹನವನ್ನು ತಡೆಗಟ್ಟಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಲಕ್ಷಾಂತರ ಮೌಲ್ಯದ ಬೀಟೆಮರ ಮತ್ತು ಎರಡು ಕಾರು, ಒಂದು ಲಾರಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದು. ಶುಂಠಿ ಬೆಳೆಯ ಹೆಸರಿನಲ್ಲಿ ಬೆಲೆಬಾಳುವ ಮರಗಳನ್ನು ಸಾಗಿಸುವ ಹುನ್ನಾರ ಇದಾಗಿದೆ ಎನ್ನುವ ಅಂಶ ಬಯಲಾಗುತ್ತಿದೆ.! - ಸಿಂಚು