ಬೆಂಗಳೂರು, ಡಿ. ೨೦: ರಾಜ್ಯದಲ್ಲಿ ಕೊರೊನಾ ಭೀತಿ ಮತ್ತೆ ಆವರಿಸಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮಾರ್ಗಸೂಚಿ ಪ್ರಕಟಿಸಿದ್ದು, ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್ -೧ ಆತಂಕದ ನಡುವೆ ಕೊರೊನಾ ವೈರಸ್ ಸೋಂಕಿಗೆ ಬೆಂಗಳೂರಿನ ಚಾಮರಾಜಪೇಟೆಯ ೬೪ ವರ್ಷದ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ೫ ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸಂಜೆ ವೇಳೆಗೆ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ನಲ್ಲಿ ಮತ್ತೊಂದು ಸಾವು ವರದಿಯಾಗಿದ್ದು, ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ೨ಕ್ಕೆ ಏರಿದೆ. ಸೋಂಕಿತರ ಸಂಖ್ಯೆ ೨೨ಕ್ಕೆ ತಲುಪಿದೆ.
ಕೋವಿಡ್ನಿಂದ ಸಾವನ್ನಪ್ಪಿದ ಚಾಮರಾಜನಗರ ವ್ಯಕ್ತಿಯ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಹೃದಯ ಸಂಬAಧಿ ಕಾಯಿಲೆ ಇತ್ತು. ಟಿಬಿ ಕಾಯಿಲೆ ಕೂಡಾ ಇತ್ತು, ಜೊತೆಗೆ ಕೋವಿಡ್ ಬಂದ ಹಿನ್ನೆಲೆಯಲ್ಲಿ ಅವರ ಸಾವು ಆಗಿದೆ. ಮೃತ ವ್ಯಕ್ತಿಯ ಕುಟುಂಬದಲ್ಲಿ ಒಟ್ಟು ೫ ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ವೇಳೆ ಐವರಿಗೂ ನೆಗೆಟಿವ್ ಬಂದಿದೆ. ಸದ್ಯ ಐದು ಜನರು ಕೂಡ ಕ್ವಾರಂಟೈನ್ನಲ್ಲಿ ಇದ್ದಾರೆ. ಮೃತಪಟ್ಟ ವ್ಯಕ್ತಿಯ ಜೆನೆಮಿಕ್ ಸೀಕ್ವೆನ್ಸ್ ರಿಪೋರ್ಟ್ಗಾಗಿ ಬಿಬಿಎಂಪಿ ಕಾಯುತ್ತಿದೆ. ಅವರಿಗೆ ಜೆಎನ್-೧ ಇತ್ತೇ ಎನ್ನುವುದು ಖಾತರಿಪಟ್ಟಿಲ್ಲ ಎಂದರು.
ಈ ಕುರಿತು ವಿಕಾಸಸೌಧದಲ್ಲಿ ಸುದ್ದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಐದು ಜನರ ಸಾವು ಆಗಿದೆ. ಹಾರ್ಟ್, ಕ್ಯಾನ್ಸರ್ ಸಮಸ್ಯೆ ಇದ್ದವರಿಗೆ ಕೋವಿಡ್ ಆದಾಗ ಸಾವು ಆಗಿದೆ. ಕೇರಳದಲ್ಲಿ ಕೋವಿಡ್ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಶಬರಿಮಲೆಗೆ ಭಕ್ತ ಸಾಗರ ಹರಿದುಬರುತ್ತಿದೆ. ಕೇಂದ್ರ ಆರೋಗ್ಯ ಸಚಿವರೊಂದಿಗೆ ವೆಂಟಿಲೇಟರ್ ನಿರ್ವಹಣೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಐಸಿಎಂಆರ್ ಫೋರ್ಟಲ್ ಡೇಟಾ ಮಾಹಿತಿ ಸಿಗುತ್ತಿಲ್ಲ, ಪೋರ್ಟಲ್ ಸರಿಪಡಿಸಲು ಮನವಿ ಮಾಡಿದ್ದೇವೆ. ಕಡ್ಡಾಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್ ಹಾಕಲು ಸೂಚನೆ ನೀಡಲಾಗಿದೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಏನು ಕ್ರಮ ಎಂಬ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಅದರ ಬಗ್ಗೆ ಯಾವುದೇ ನಿಬಂಧನೆಗಳು ಇಲ್ಲ ಎಂದಿದ್ದಾರೆ. ಗಡಿ ಭಾಗದಲ್ಲಿ ನಿಬಂಧನೆಗಳ ಬಗ್ಗೆ ಕೇಂದ್ರ ಸೂಚನೆ ನೀಡಿಲ್ಲ. ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲಿ, ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಹಾಕಿದರೆ ಉತ್ತಮ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪಡೆದಿದೆ. ಜೆಎನ್.೧ ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ದೇಶದಲ್ಲಿ ೨೦ ಜೆ ಎನ್.೧ ಪ್ರಕರಣಗಳು ಪತ್ತೆಯಾಗಿವೆ. ಗೋವಾದಲ್ಲಿ ೧೮, ಮಹಾರಾಷ್ಟçದಲ್ಲಿ ೧, ಕೇರಳದಲ್ಲಿ ೧ ಕೇಸ್ ಪತ್ತೆಯಾಗಿದೆ ಎಂದು ಗುಂಡೂರಾವ್ ಮಾಹಿತಿ ನೀಡಿದರು.
೫ ಸಾವಿರ ಟೆಸ್ಟಿಂಗ್: ಕೋವಿಡ್ ಟೆಸ್ಟಿಂಗ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಮುಂಬರುವ ಶನಿವಾರದ ವೇಳೆಗೆ ಪ್ರತಿ ನಿತ್ಯ ೫ ಸಾವಿರ ಪ್ರಕರಣಗಳ ಟೆಸ್ಟಿಂಗ್ ನಡೆಸುವಂತಾಗಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿ ಕೋವಿಡ್ ಕುರಿತು ನಿಗಾ ಇಡುವಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಹೃದಯ ಸಂಬAಧಿ, ಉಸಿರಾಟದ ಸಮಸ್ಯೆ, ಇನ್ಫೆಕ್ಷನ್ ಗಳಿಗೆ ಒಳಗಾದವರನ್ನು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ಒಳಪಡಿಸಲು ಸೂಚನೆ ನೀಡಲಾಗಿದೆ. ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್ಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸಿಕೊಂಡು ಮುಂಜಾಗೃತವಾಗಿ ಸಜ್ಜಾಗಿರಬೇಕು. ಹೊರ ರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಲಕ್ಷಣಗಳಿದ್ದವರನ್ನು ಕಡ್ಡಾಯವಾಗಿ ಟೆಸ್ಟಿಂಗ್ಗೆ ಒಳಪಡಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಸದ್ಯಕ್ಕೆ ಗಡಿ ಬಂದ್ ಮಾಡುವ ಪರಿಸ್ಥಿತಿ ಇಲ್ಲ. ರಾಜ್ಯಾದ್ಯಂತ ಅಗತ್ಯ ಆರ್.ಟಿ.ಪಿ.ಸಿ.ಆರ್ ಟೆಸ್ಟಿಂಗ್ ಕಿಟ್ ಸರಬರಾಜಿಗೆ ಸೂಚನೆ ನೀಡಲಾಗಿದೆ ಎಂದರು. ಕೇರಳ ಗಡಿಯ ೪ ಜಿಲ್ಲೆಗಳಲ್ಲಿ (ಕೊಡಗೂ ಸೇರಿದಂತೆ) ಹೆಚ್ಚು ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.
ಗುರುವಾರ (ಇಂದು) ಸಭೆ: ಕೋವಿಡ್ ಕುರಿತು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಎಚ್ಚರಿಕೆ ವಹಿಸಿ ಎಂದ ಕೇಂದ್ರ ಸರ್ಕಾರ: ದೇಶದಲ್ಲಿ ಮಹಾಮಾರಿ ಕೋವಿಡ್-೧೯ ಮತ್ತೆ ಆತಂಕವನ್ನು ಹುಟ್ಟಿಸುತ್ತಿದೆ. ಈ ನಡುವಲ್ಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬುಧವಾರ ಆರೋಗ್ಯ ಸೌಲಭ್ಯಗಳ ಸನ್ನದ್ಧತೆಯನ್ನು ಪರಿಶೀಲನೆ ನಡೆಸಿದ್ದು, ಆತಂಕ ಪಡುವ ಅಗತ್ಯವಿಲ್ಲ, ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅದರಲ್ಲಿ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಮನ್ಸುಖ್ ಮಾಂಡವಿಯಾ ಅವರು, ಸೋಂಕು ಕುರಿತು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಎಚ್ಚರದಿಂದಿರಬೇಕು. ರಾಜ್ಯಗಳಿಗೆ ಕೇಂದ್ರದಿAದ ಎಲ್ಲಾ ರೀತಿಯ ಬೆಂಬಲ ಸಿಗಲಿದೆ ಎಂದು ಹೇಳಿದರು. ರಾಜ್ಯಗಳು ಆಸ್ಪತ್ರೆಯ ಸನ್ನದ್ಧತೆ, ಕಣ್ಗಾವಲು ಹೆಚ್ಚಿಸುವುದು ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಮುಖ್ಯವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್ಗಳನ್ನು ನಡೆಸಬೇಕು. ಹಬ್ಬಗಳ ಮುನ್ನ ಸೋಂಕು ತಡೆಗಟ್ಟುವ ಕ್ರಮಗಳನ್ನು ಆಯಾ ರಾಜ್ಯಗಳು ಕೈಗೊಳ್ಳಬೇಕೆಂದು ತಿಳಿಸಿದರು. ನಮ್ಮ ಸನ್ನದ್ಧತೆಯಲ್ಲಿ ಕೊರತೆ ಇರಬಾರದು. ಆರೋಗ್ಯವು ರಾಜಕೀಯದ ಕ್ಷೇತ್ರವಲ್ಲ. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳ ಬೆಂಬಲಕ್ಕೆ ನಿಲ್ಲಲಿದೆ. ಎಲ್ಲಾ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವ ಸಮಯ ಇದಾಗಿದೆ ಎಂದರು.
ಬಸ್ಗಳಲ್ಲಿ ಮಾಸ್ಕ್ಗೆ ಮನವಿ: ಈ ನಡುವೆ ರಾಜ್ಯದಲ್ಲಿ ಕೋವಿಡ್ ಭೀತಿ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಯಂತೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸಬೇಕು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ. ಅದರಲ್ಲೂ ೬೦ ವರ್ಷ ಮೇಲ್ಪಟ್ಟವರು ಶೀತ - ಜ್ವರ ಲಕ್ಷಣವಿರುವವರು ಮಾಸ್ಕ್ ಧರಿಸುವುದು ಅತ್ಯಗತ್ಯ ಎಂದರು.
ಕೇAದ್ರ ಸರ್ಕಾರದ ಆದೇಶದಂತೆ ಮುಜರಾಯಿ ಇಲಾಖೆ ಹಾಗೂ ಸಾರಿಗೆ ನಿಗಮಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕೇರಳದಲ್ಲಿ ಕೋವಿಡ್ ಆರ್ಭಟ ಹಿನ್ನೆಲೆ ಕೆಎಸ್ಆರ್ಟಿಸಿ ಮತ್ತೆ ಅಲರ್ಟ್ ಆಗಿದ್ದು, ಕೇರಳದಿಂದ ಬರುವ ಹಾಗೂ ಹೋಗುವ ಬಸ್ಸುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿಯಿತ್ತರು.