ಕಣಿವೆ, ಡಿ. ೨೦: ಪ್ರವಾಸಿಗರು ಹೆಚ್ಚು ಆಗಮಿಸುವ ೭ನೇ ಹೊಸಕೋಟೆ, ತೊಂಡೂರು ಮೊದಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಬದಿ ಡ್ರೆöÊಪ್ಯಾಡ್, ಪ್ಲಾಸ್ಟಿಕ್ ಮೊದಲಾದ ಕಸದ ತ್ಯಾಜ್ಯ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಇ.ಬಿ. ಜೋಸೆಫ್ ಅಧ್ಯಕ್ಷತೆಯಲ್ಲಿ ನಡೆದ ೭ನೇ ಹೊಸಕೋಟೆ ಗ್ರಾಮಸಭೆಯಲ್ಲಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸಿಗರು ತಮ್ಮಲ್ಲಿ ಸಂಗ್ರಹಣೆಯಾಗುವ ಮಾಸಿಕ ಋತುಸ್ರಾವದ ಪ್ಯಾಡ್ಗಳು, ಮಕ್ಕಳಿಗೆ ಬಳಸುವ ಪ್ಯಾಡ್ಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಮನಬಂದAತೆ ಬಿಸಾಕಿ ತೆರಳುತ್ತಿದ್ದಾರೆ. ಜೊತೆಗೆ ಕೆಲವರು ಚೀಲಗಳಲ್ಲಿ ಕಸವನ್ನು ತುಂಬಿಸಿ ತಂದು ಬಿಸಾಕುತ್ತಿದ್ದು, ಬೀದಿ ನಾಯಿಗಳು ಚೀಲಗಳನ್ನು ಎಳೆದಾಡಿ ಪರಿಸರ ಮಾಲಿನ್ಯ ಮಾಡುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗ ಬಾಧೆ ಭೀತಿ ಆವರಿಸಿದೆ.
ಇದರಿಂದಾಗಿ ನಮಗೆ ತೊಂದರೆಯಾಗುತ್ತಿದ್ದು, ಗ್ರಾಮಗಳು ಕಸದ ತೊಟ್ಟಿಗಳಾಗುತ್ತಿವೆ ಎಂದು ತೊಂಡೂರು ಗ್ರಾಮದ ಕೆ.ಎನ್. ಸಂತೋಷ್, ರೇಖಾ, ರಶ್ಮಿ ಮೊದಲಾದವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಇ.ಬಿ. ಜೋಸೆಫ್, ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಭೀಕರ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಶೀಘ್ರದಲ್ಲೇ ಸೂಕ್ತ ಪರಿಹಾರ ಹುಡುಕುವುದಾಗಿ ಹೇಳಿದರು.
ತೊಂಡೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ದೂರುಗಳ ಸುರಿಮಳೆಗೈದರು.
ರಸ್ತೆ ಕಾಮಗಾರಿಗೆಂದು ಮೀಸಲಿರಿಸಿದ್ದ ಅನುದಾನವನ್ನು ಹಿಂಪಡೆದಿರುವ ಬಗ್ಗೆ ಸದಸ್ಯ ರಮೇಶ್ ಸಭೆಯಲ್ಲಿದ್ದ ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಫಯಾಜ್ ಅವರನ್ನು ಪ್ರಶ್ನಿಸಿದಾಗ, ಅದು ನಮ್ಮ ಇಲಾಖೆಯ ಅನುದಾನವಲ್ಲ. ಯಾವ ಇಲಾಖೆಯ ಅನುದಾನ ಎಂದು ಖಚಿತಪಡಿಸಿಕೊಳ್ಳಿ ಎಂದರು.
ತೊAಡೂರು ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಕ್ಕೆ ತಡೆಗೋಡೆ ಇಲ್ಲ. ಹೀಗಾಗಿ ಇಲ್ಲಿನ ಮಕ್ಕಳು ನೇರವಾಗಿ ರಸ್ತೆಗೆ ಓಡಿ ಬರುವ ಅಪಾಯವಿದೆ. ಕೂಡಲೇ ತಡೆಗೋಡೆ ನಿರ್ಮಿಸಿ ಎಂದು ಶ್ರೀಜಾ ಎಂಬವರು ಆಗ್ರಹಿಸಿದರು.
ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಅಪಾಯ ಸೃಷ್ಟಿಯಾಗುತ್ತಿದೆ. ಹಾಗಾಗಿ ಕೊಡಗಿನಿಂದ ಶಬರಿಮಲೆಗೆ ಯಾತ್ರೆ ತೆರಳಿ ಮರಳುವವರನ್ನು ತಪಾಸಣೆಗೆ ಒಳಪಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಬೇಕಿದೆ ಎಂದು ೭ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ಸಭೆಯ ನೋಡಲ್ ಅಧಿಕಾರಿ ಸೋಮಯ್ಯ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಇ.ಬಿ. ಜೋಸೆಫ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ. ಹಾಗೆಯೇ ಪಂಚಾಯಿತಿಯ ಎಲ್ಲಾ ಸದಸ್ಯರ ಸಹಭಾಗಿತ್ವದಲ್ಲಿ ಸರ್ಕಾರದಿಂದ ದೊರಕುವ ಅನುದಾನಗಳನ್ನು ಬಳಸಿಕೊಂಡು ಆದ್ಯತೆಯ ಮೇರೆ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದರು.
ಹಾಗೆಯೇ ಕಾಡಾನೆಗಳ ನಿಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸುವುದಾಗಿ ಅಧ್ಯಕ್ಷ ಜೋಸೆಫ್ ಹೇಳಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗೆ ಸಂಬAಧಿಸಿದ ಮಾಹಿತಿ ನೀಡಿದರು.
ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯಶ್ರೀ, ಸಿದ್ದಿಕ್, ಮಧುಸೂದನ್, ಕಮಲ, ಸಿಂಧೂ, ವೇದಾವತಿ, ಚಂದ್ರಾವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ ಕುಮಾರ್ ಇದ್ದರು.