ಕುಶಾಲನಗರ, ಡಿ. ೨೦: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಕುಶಾಲನಗರದ ಉದ್ಯಮಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಹೆಬ್ಬಾಲೆ ಸಮೀಪ ಅಳುವಾರ ಗ್ರಾಮ ಬಳಿ ನಡೆದಿದೆ.
ಸಿದ್ದಲಿಂಗಪುರದಲ್ಲಿ ಮದ್ಯದ ಅಂಗಡಿ ನಡೆಸುತ್ತಿದ್ದ ಥಾಮಸ್ ಮ್ಯಾಥ್ಯೂ (೫೦) ಎಂಬವರು ಮೃತಪಟ್ಟ ವ್ಯಕ್ತಿ. ಥಾಮಸ್ ಅವರು ಸಿದ್ದಲಿಂಗಪುರ ದಲ್ಲಿ ಇರುವ ತಮ್ಮ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ (ಕೆಎ೧೨ಕೆ೩೧೦೦) ಕುಶಾಲನಗರಕ್ಕೆ ರಾತ್ರಿ ವೇಳೆ ಬರುತ್ತಿದ್ದ ಸಂದರ್ಭ ಎದುರುಗಡೆಯಿಂದ ಬಂದ ಬೈಕ್ (ಕೆಎ ೪೫ಹೆಚ್೨೦೩೬) ಡಿಕ್ಕಿಯಾಗಿ ಎರಡು ವಾಹನಗಳ ಸವಾರರು ಸೇರಿದಂತೆ ಮೂವರು ತೀವ್ರ ಗಾಯಗಳಿಗೆ ಒಳಗಾಗಿದ್ದಾರೆ.
ತಲೆಗೆ ತೀವ್ರ ಪೆಟ್ಟಾಗಿ ಥಾಮಸ್ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.
ಮತ್ತೊಂದು ಬೈಕ್ ಸವಾರ ಅರೆಯೂರು ಗ್ರಾಮದ ಧರ್ಮಪ್ಪ ಮತ್ತು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ತಿಳಿಸಿದ್ದಾರೆ. ಮೃತ ಥಾಮಸ್ ಅವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.