ಸೋಮವಾರಪೇಟೆ, ಡಿ. ೧೯: ಸಂಸತ್ ಭವನದೊಳಗೆ ಪ್ರವೇಶಿಸಿ ರಾದ್ಧಾಂತ ಸೃಷ್ಟಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ, ನೈತಿಕ ಹೊಣೆ ಹೊತ್ತು ಸಂಸತ್ ಸದಸ್ಯ ಪ್ರತಾಪ್ ಸಿಂಹ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರುಗಳು ರಾಜೀ ನಾಮೆ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಸಂಸದ ಪ್ರತಾಪ್ ಸಿಂಹ ಹಾಗೂ ಅಮಿತ್ ಷಾ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಸತ್ನೊಳಗೆ ಪ್ರವೇಶಿಸಿ ರಾದ್ಧಾಂತ ಸೃಷ್ಟಿಸಿದ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ನೀಡಲಾಗಿದೆ. ಪ್ರಕರಣದ ಬಗ್ಗೆ ಎಲ್ಲರಿಗೂ ಸಂಶಯವಿದ್ದು, ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ದೇಶದ ಉನ್ನತ ಸ್ಥಾನವಾದ ಸಂಸತ್ನಲ್ಲಿ ಭದ್ರತೆಯನ್ನು ಒದಗಿಸಲಾಗದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಮುಖರು ಆಗ್ರಹಿಸಿದರು.
ಒಂದು ವೇಳೆ ಕಾಂಗ್ರೆಸ್ ಅಥವಾ ಇನ್ಯಾವುದೇ ಪಕ್ಷದ ಸಂಸದರ ಕಚೇರಿಯಿಂದ ಪಾಸ್ ನೀಡಿರುತ್ತಿದ್ದರೆ ಬಿಜೆಪಿಯವರು ಸುಮ್ಮನಿರುತ್ತಿದ್ದರಾ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಸಂಸತ್ ಭವನದೊಳಗಿನ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯ ನಡೆಯಬಾರದು. ನೈತಿಕ ಹೊಣೆ ಹೊತ್ತು ಪ್ರತಾಪ್ ಸಿಂಹ ಮತ್ತು ಅಮಿತ್ ಷಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜಿ. ಇಂದ್ರೇಶ್, ಪ್ರಮುಖರಾದ ಔರಂಗಜೇಬ್, ಅಬ್ದುಲ್ ರಜಾಕ್, ಹೆಚ್.ಸಿ. ನಾಗೇಶ್, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್, ರಾಜಪ್ಪ, ಸುಜಿತ್, ಜಾನಕಿ ವೆಂಕಟೇಶ್, ಮೀನಾಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.