ಮಡಿಕೇರಿ, ಡಿ. ೧೯: ನದಿತೀರದಲ್ಲಿ ಮರಕಡಿಯಲು ಮಕ್ಕಂದೂರು ಗ್ರಾಮ ಪಂಚಾಯಿತಿ ಆಕ್ಷೇಪ ವ್ಯಕ್ತಪಡಿಸಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ. ತಾ. ೧೮ ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ತಡೆಗೋಡೆ ನಿರ್ಮಾಣ ನೆಪದಲ್ಲಿ ನದಿತೀರದ ಮರಗಳ ಹನನ!’ ವರದಿ ಪ್ರಕಟ ಬಳಿಕ ಪಂಚಾಯಿತಿ ಆಡಳಿತ ಮಂಡಳಿ ಇಂದು ಉಪಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲು ನದಿತೀರದಲ್ಲಿ ಮರಗಳನ್ನು ಕಡಿಯಲು ಗುರುತು ಮಾಡಿರುವುದನ್ನು ವಿರೋಧಿಸಿದೆ.

(ಮೊದಲ ಪುಟದಿಂದ) ಈ ವಿಚಾರದಲ್ಲಿ ಸ್ಥಳೀಯರು ಹಾಗೂ ಗ್ರಾ.ಪಂ. ಅನೇಕ ಬಾರಿ ಆಕ್ಷೇಪಿಸಿದ್ದು, ಈ ಹಿಂದೆಯೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ, ಯಾವುದೇ ಸ್ಪಂದನ ವ್ಯಕ್ತವಾಗಿರಲಿಲ್ಲ. ಈ ಹಿನ್ನೆಲೆ ಗ್ರಾ.ಪಂ. ಆಡಳಿತ ಮಂಡಳಿಯ ತುರ್ತು ಸಭೆ ಕರೆದು ಮರ ಕಡಿಯದಂತೆ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಬಿ.ಎನ್. ರಮೇಶ್, ಸದಸ್ಯರುಗಳಾದ ಕನ್ನಿಕಂಡ ಶಾಂ ಸುಬ್ಬಯ್ಯ, ಕಟ್ಟೆಮನೆ ಗಣೇಶ್ ಹಾಜರಿದ್ದರು.