ಕುಶಾಲನಗರ, ಡಿ. ೧೯: ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮತ್ತು ಆರ್.ಪಿ.ಐ.ಕೆ. ಕರ್ನಾಟಕ ಪಕ್ಷ ಸಂಯುಕ್ತ ಆಶ್ರಯದಲ್ಲಿ ಡಾ. ಅಂಬೇಡ್ಕರ್ ಅವರ ೬೭ನೇ ಮಹಾ ಪರಿನಿರ್ವಾಣ ದಿನ ಆಚರಣೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ನಡೆದ ಸಮಾರಂಭವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಮತ್ತು ಆರ್.ಪಿ.ಐ. ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಡಾ. ಆರ್. ಮೋಹನ್ ರಾಜ್ ಅವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರಿಗಷ್ಟೇ ಸೀಮಿತರಲ್ಲ. ದೇಶದ ಎಲ್ಲಾ ಜನರಿಗೂ ಅವರು ನಾಯಕರಾಗಿದ್ದು, ಪ್ರತಿಯೊಬ್ಬರೂ ಅವರ ಅನುಯಾಯಿಗಳಾಗಬೇಕು ತಳಮಟ್ಟದ ಜನರಿಗೆ ಸರಕಾರದ ಪ್ರತಿಯೊಂದು ಸೌಲಭ್ಯಗಳು ತಲುಪುವಂತೆ ಮಾಡುವುದು ಸಂಘಟನೆಗಳ ಕರ್ತವ್ಯವಾಗಿದೆ ಎಂದರು.
ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಬದುಕು ಸಾಗಿಸುವುದು ಮುಖ್ಯವಲ್ಲ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರಿಗೂ ತಿಳಿಸಿಕೊಡುವುದು ಸಂಘಟನಾಕಾರರ ಕರ್ತವ್ಯವಾಗಿದೆ ಅದೇ ರೀತಿ ತಳಮಟ್ಟದಲ್ಲಿ ಸಂಘಟನೆಗಳನ್ನು ಕಟ್ಟುವುದು. ರಾಜಕೀಯವಾಗಿ ಬೆಳೆಯುವ ಬಗ್ಗೆ ಚಿಂತನೆ ಹರಿಸಬೇಕಾಗಿದೆ ಎಂದರು. ರಾಜ್ಯ ಸಂಘಟನಾ ಸಂಚಾಲಕರಾದ ಕೆ.ಬಿ. ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ರಾಜು ಎಂ. ತಳವಾರ್, ರಾಜ್ಯ ಖಜಾಂಚಿ ರಾಯಿಮನೆ, ರಾಜ್ಯ ಸಂಘಟನಾ ಸಂಚಾಲಕರಾದ ಕೆ.ಎ. ಓಬಳೇಶ್ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಇದ್ದರು.