ಸೋಮವಾರಪೇಟೆ, ಡಿ. ೨೦: ಇತರ ಜಿಲ್ಲೆಗಳ ರೈತರ ೧೦ ಹೆಚ್.ಪಿ. ವರೆಗಿನ ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಿರುವಂತೆ ಕೊಡಗಿನ ರೈತರಿಗೂ ಉಚಿತ ವಿದ್ಯುತ್ ಒದಗಿಸಬೇಕೆಂದು ಆಗ್ರಹಿಸುತ್ತಲೇ ಬಂದಿರುವ ರೈತ ಸಂಘವು, ಇಂದು ಚೆಸ್ಕಾಂ ಹಾಗೂ ಇಂಧನ ಸಚಿವರ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ವಿದ್ಯುತ್ ಬಿಲ್ ಹಾಗೂ ಮೀಟರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.
೧೦ ಹೆಚ್.ಪಿ.ವರೆಗಿನ ವಿದ್ಯುತ್ ಉಚಿತವಾಗಿ ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಷರತ್ತುಗಳನ್ನು ವಿಧಿಸದೇ ಬೇಷರತ್ತಾಗಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿಕೊಂಡು ಬರುತ್ತಿರುವ ನಡುವೆಯೇ, ಸೆಸ್ಕ್ ಇಲಾಖೆಯವರು ಡಿಬಿಟಿ ಯೋಜನೆ ಜಾರಿಗೆ ಈ ಹಿಂದಿನ ಶುಲ್ಕವನ್ನು ಮರುಪಾವತಿ ಮಾಡುವಂತೆ, ತಪ್ಪಿದ್ದಲ್ಲಿ ಇಲಾಖೆಯ ನಿಯಮಾನುಸಾರ ಕ್ರಮ ಜರುಗಿಸುವ ಬಗ್ಗೆ ಪ್ರಕಟಣೆಗಳನ್ನು ಹೊರಡಿಸಿದ ಬೆನ್ನಲ್ಲೇ ರೈತ ಸಂಘವು ತನ್ನ ಆಕ್ರೋಶ ಹೊರಹಾಕಿದ್ದು, ಸಂಬAಧಿಸಿದ ಸಚಿವರು ಹಾಗೂ ಸೆಸ್ಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ರೈತರ ತಾಳ್ಮೆ ಪರೀಕ್ಷೆ ಮಾಡಬಾರದೆಂದು ಎಚ್ಚರಿಸಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರಕ್ಕೆ ಕೆಲಕಾಲ ತಡೆಯೊಡ್ಡಿದ ಪ್ರತಿಭಟನಾ ನಿರತ ರೈತರು, ಸರ್ಕಾರದ ನಿರ್ಲಕ್ಷö್ಯದ ವಿರುದ್ಧ ಆಕ್ರೋಶ ಹೊರಹಾಕಿದರು. ಮೀಟರ್ಗಳನ್ನು ಸುಟ್ಟು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಕೂತಿ ದಿನೇಶ್ ಅವರು, ಎ.ಸಿ. ಕೊಠಡಿಯಲ್ಲಿ ಕುಳಿತಿರುವ ಅಧಿಕಾರಿಗಳಿಗೆ ರೈತರ ಸಂಕಷ್ಟ ಕಾಣಿಸುತ್ತಿಲ್ಲ. ಕಣ್ಣಿದ್ದೂ ಕುರುಡು-ಕಿವಿಯಿದ್ದೂ ಕಿವುಡು ಎಂಬAತೆ ಸರ್ಕಾರ ವರ್ತಿಸುತ್ತಿದೆ. ನಮಗಳ ಬೇಡಿಕೆಗಳ ಬಗ್ಗೆ ಗಮನ ಹರಿಸದೇ ಇರುವುದರಿಂದ ಸೆಸ್ಕ್ ಅಧಿಕಾರಿಗಳು ಪೊಲೀಸ್ ಬಂದೋ ಬಸ್ತ್ ಮೂಲಕ ರೈತರ ಜಮೀನಿಗೆ ಆಗಮಿಸಿ ಕೃಷಿ ಪಂಪ್ಸೆಟ್ಗಳ ವಿದ್ಯುತ್ ಕಡಿತ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಕಾಲದಲ್ಲಿ ಮಳೆಯಾಗದೇ ಇರುವುದರಿಂದ ಬರಗಾಲ ಆವರಿಸಿದೆ. ಸರ್ಕಾರವೇ ಬರಪೀಡಿತ ತಾಲೂಕಾಗಿ ಘೋಷಣೆ ಮಾಡಿದೆ. ಆದರೂ ವಿದ್ಯುತ್ ಶುಲ್ಕ ವಸೂಲಿಗೆ ಮುಂದಾಗಿರುವುದು, ಸಾಲ ಮರುಪಾವತಿ ಮಾಡಿದ ರೈತರಿಗೆ ಮಾತ್ರ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರ್ಕಾರ ಘೋಷಿಸಿರುವುದು ಸರಿಯಲ್ಲ. ಮೊದಲು ಬೆಳೆ ಪರಿಹಾರ ಮಂಜೂರು ಮಾಡಿ ರೈತರ ಹಿತ ಕಾಪಾಡಲಿ ಎಂದು ಒತ್ತಾಯಿಸಿದರು.
ರೈತರ ಕೃಷಿ ಪಂಪ್ಸೆಟ್ಗಳಿಗೆ ನೀಡಿರುವ ವಿದ್ಯುತ್ ಸ್ಥಗಿತಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಮುಂದಿನ ತೊಂದರೆಗಳಿಗೆ ಸೆಸ್ಕ್ ಹಾಗೂ ಸರ್ಕಾರವೇ ಹೊಣೆಯಾಗಲಿದೆ ಎಂದು ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರುಗಳಾದ ಮಚ್ಚಂಡ ಅಶೋಕ್, ಹೆಚ್.ಬಿ. ರಾಜಪ್ಪ, ಲಿಂಗೇರಿ ರಾಜೇಶ್, ಯಡೂರು ಕುಶಾಲಪ್ಪ, ಬಗ್ಗನ ಅನಿಲ್ಕುಮಾರ್, ಹೆಚ್.ಎಂ. ಸೋಮಪ್ಪ, ಗೌಡಳ್ಳಿ ಸುನಿಲ್, ಗರಗಂದೂರು ರೋಹಿತ್, ಗೌಡಳ್ಳಿ ಪೃಥ್ವಿ, ಗಣಗೂರು ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.