ಸೋಮವಾರಪೇಟೆ, ಡಿ. ೧೯: ಸಮೀಪದ ಕಿರಗಂದೂರು ಗ್ರಾ.ಪಂ. ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಗ್ರಾಮ ಸಭೆ ಯಲ್ಲಿ ಭಾಗ ವಹಿಸಿದ್ದ ಸಾರ್ವಜನಿಕರು ಮೂಲ ಭೂತ ಸೌಕರ್ಯಗಳ ಬಗ್ಗೆ ಅಧಿಕಾರಿ ಗಳ ಗಮನ ಸೆಳೆದರು. ಗ್ರಾ.ಪಂ. ಅಧ್ಯಕ್ಷೆ ತಾರಾ ಸುಧೀರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹಲವಷ್ಟು ವಿಚಾರಗಳು ಚರ್ಚೆಗೆ ಬಂದವು. ಪ್ರಮುಖವಾಗಿ ವಿದ್ಯುತ್, ರಸ್ತೆ, ಕುಡಿಯುವ ನೀರಿನ ಅವ್ಯವಸ್ಥೆಗಳ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು. ಕೆಳಗಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಟ್ರಾನ್ಸ್ಫಾರ್ಮರ್ ಅಳವಡಿಸದೇ ಇರುವುದರಿಂದ ಸಮಸ್ಯೆಯಾಗಿದೆ. ಮಳೆಗಾಲದಲ್ಲಂತೂ ದಿನಗಟ್ಟಲೆ ವಿದ್ಯುತ್ ಇರುವುದಿಲ್ಲ. ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಜಲ ಜೀವನ್ ಮಿಷನ್ ಯೋಜನೆಯಡಿ ನಿರೀಕ್ಷೆ ಯಂತೆ ಕೆಲಸ ಆಗಿಲ್ಲ. ಬಿಳಿಗೇರಿ, ಕಿರ ಗಂದೂರು ಭಾಗದಲ್ಲಿ ಬೋರ್ವೆಲ್ ಕೊರೆಸಿಲ್ಲ. ಪೈಪ್ಲೈನ್ ಅಳವಡಿಸಿಲ್ಲ. ನೀರಿನ ಟ್ಯಾಂಕ್ ಮಾಡಿದ್ದರೂ ಬೋರ್ವೆಲ್ ಕೊರೆಸದೇ ಇರುವುದರಿಂದ ನೀರು ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ದರು. ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟವನ್ನು ಅಭಿವೃದ್ಧಿ ಮಾಡಬೇಕಿದೆ. ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆಕರ್ಷಣೆ ಹೆಚ್ಚಿಸಿದರೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈ ಬಗ್ಗೆ ಗ್ರಾ.ಪಂ. ಗಮನ ಹರಿಸಬೇಕೆಂದು ಬಿ.ಬಿ. ಸತೀಶ್ ಸೇರಿದಂತೆ ಸಾರ್ವಜನಿಕರು ಸಲಹೆ ನೀಡಿದರು. ಕಿರಗಂದೂರು, ಕೆಳಗಳ್ಳಿ, ಚಿನ್ನಳ್ಳಿ ರಸ್ತೆ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಗ್ರಾಮಗಳ ರಸ್ತೆಗಳನ್ನು ದುರಸ್ತಿ ಪಡಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಎಂ.ಎA. ಬೆಳ್ಳಿಯಪ್ಪ, ಸದಸ್ಯರುಗಳಾದ ಎಸ್.ಕೆ. ರಘು, ರುದ್ರಪ್ಪ, ಕುಸುಮ, ಶುಭರಾಣಿ, ಶ್ಯಾಮಲಾ, ತಿಮ್ಮಯ್ಯ, ಪಿಡಿಓ ರಜನಿ, ನೋಡಲ್ ಅಧಿಕಾರಿ ಹೆಚ್.ಆರ್. ಶೇಖರ್, ವಿವಿಧ ಇಲಾಖಾಧಿ ಕಾರಿಗಳು ಉಪಸ್ಥಿತರಿದ್ದರು.