ಸೋಮವಾರಪೇಟೆ, ಡಿ.೧೮ : ತಾಲೂಕು ಕಂದಾಯ ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರ ಸಂಘದ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಲಾಗಿದ್ದು, ಇಲಾಖೆಯ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.

ತಾಲೂಕು ಆಡಳಿತ ಸೌಧದಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಕಂದಾಯ ಹಾಗೂ ಸರ್ವೆ ಇಲಾಖೆಯ ಕೆಲ ಭ್ರಷ್ಟರನ್ನು ಸಾಮೂಹಿಕ ವರ್ಗಾವಣೆ ಮಾಡಬೇಕು. ಇದರೊಂದಿಗೆ ರೈತರ ದುರಸ್ತಿ ಕಡತಗಳು ವಿಲೇವಾರಿಯಾಗು ತ್ತಿಲ್ಲ. ಸೂಕ್ತ ಆಸ್ತಿ ದಾಖಲೆಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ರಾತ್ರಿಯವರೆಗೂ ಧರಣಿ ಮುಂದುವರೆಸಿದರು.

ಮಧ್ಯವರ್ತಿಗಳ ಮೂಲಕ ಲಂಚ ಕೊಟ್ಟವರು ಹಾಗೂ ನಗರ ಪ್ರದೇಶದವರ ಆಸ್ತಿ ದುರಸ್ತಿ ಕಡತಗಳು ಮೂರು ತಿಂಗಳಲ್ಲೇ ವಿಲೇವಾರಿಯಾಗಿ, ದಾಖಲಾತಿಗಳು ಮನೆಗೆ ತಲುಪುತ್ತಿವೆ. ಆದರೆ ಬಡ ರೈತರ ದುರಸ್ತಿ ಕಡತಗಳು ಕಳೆದ ಹತ್ತಿಪ್ಪತ್ತು ವರ್ಷಗಳಿಂದಲೂ ಕಂದಾಯ ಇಲಾಖೆಯಲ್ಲಿ ವಿಲೇವಾರಿಯಾಗದೇ ಧೂಳು ತಿನ್ನುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಂದಾಯ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಆಡಳಿತ ಸೌಧದಲ್ಲಿ ನಡೆದಿರುವ ಅಕ್ರಮ ದಾಖಲಾತಿ ನೀಡಿರುವ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು. ಬ್ರೋಕರ್‌ಗಳ ಹಾವಳಿ ಮಿತಿಮೀರಿದೆ. ಒಂದು ಎಕರೆ ದುರಸ್ತಿಗೆ ೧ಲಕ್ಷ ರೂ. ಗಳನ್ನು ಕೇಳುತ್ತಿದ್ದಾರೆ. ಹಣ ನೀಡದ ಬಡ ರೈತನ ದಾಖಲಾತಿಯನ್ನು ಕಚೇರಿಯಿಂದಲೇ ನಾಪತ್ತೆ ಮಾಡುತ್ತಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‌ಕುಮಾರ್ ದೂರಿದರು.

ಬೆಳಿಗ್ಗೆಯಿಂದಲೇ ಧರಣಿ ಆರಂಭಿ ಸಿದ್ದು, ಸಂಜೆಯ ವೇಳೆಗೆ ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರು ಆಗಮಿಸಿ, ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ತಮ್ಮ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ಸಮಾಧಾನ ಪಡಿಸಲು ಮುಂದಾದರು.

ಈ ಸಂದರ್ಭ ಮತ್ತೆ ಆಕ್ರೋಶ ಗೊಂಡ ಪ್ರತಿಭಟನಾಕಾರರು, ನಿಮ್ಮ ಭರವಸೆಗಳನ್ನು ಕೇಳಿ ಸಾಕಾಗಿದೆ. ಈ ಹಿಂದೆ ಉಪ ವಿಭಾಗಾಧಿಕಾರಿಗಳು ಬಂದು ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ಸೂಚಿಸಿದ್ದರೂ ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆ ಸುಧಾರಣೆಯಾಗಿಲ್ಲ. ನಿಮ್ಮ ಭರವಸೆಗಳು ನಮಗೆ ಬೇಡ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಅಥವಾ ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಆಗಮಿಸಬೇಕು. ಅಲ್ಲಿಯವರೆಗೂ ಧರಣಿ ಮುಂದುವರೆಸು ತ್ತೇವೆ ಎಂದು ಪಟ್ಟು ಹಿಡಿದರು.

ತಾಲೂಕು ಕಚೇರಿಯ ಪಕ್ಕದಲ್ಲೇ ಶಾಮಿಯಾನ, ಜಮಖಾನ ಹಾಕಿದ ಪ್ರತಿಭಟನಾಕಾರರು ಮಧ್ಯಾಹ್ನದ ಊಟವನ್ನು ಅಲ್ಲೇ ತಯಾರಿಸಿ ಪ್ರತಿಭಟನೆಯನ್ನು ಮುಂದುವರೆಸಿದರು.

ಧರಣಿಯಲ್ಲಿ ರೈತ ಪ್ರಮುಖರಾದ ಚೌಡ್ಲು ಗ್ರಾಮದ ಡಿ.ಎನ್.ಮದನ್ ಕುಮಾರ್, ಹೆಗ್ಗಳ ಹೂವಯ್ಯ, ಗರಗಂದೂರು ಲಕ್ಷö್ಮಣ್, ರೈತ ಸಂಘದ ಅಧ್ಯಕ್ಷ ದಿನೇಶ್, ಹಿರಿಕರ ರಮೇಶ್, ಲಿಂಗೇರಿ ರಾಜೇಶ್, ಕೆ.ಟಿ. ಪರಮೇಶ್,