ಕುಶಾಲನಗರ, ಡಿ. ೧೮: ನೆರೆಯ ಕೇರಳದಿಂದ ಓಮಿಕ್ರಾನ್ ರೂಪಾಂತರಿ ‘ಜೆಎನ್-೧’ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಫಾರಸ್ಸು ಮಾಡುವ ಚಿಂತನೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದ ಮೇಲೆ ತಾಂತ್ರಿಕ ಸಲಹಾ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
೬೦ ವರ್ಷ ಮೇಲ್ಪಟ್ಟ ಹಾಗೂ ಜ್ವರ, ಕೆಮ್ಮು ಲಕ್ಷಣ ಇರುವ ರೋಗಿಗಳು ಕಡ್ಡಾಯ ಮಾಸ್ಕ್ ಧರಿಸಬೇಕು. ಕೋವಿಡ್ ರೋಗ ಬಾಧಿತರಿಗೆ ಸಮಸ್ಯೆ ಆಗದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್ ಇರಿಸಲಾಗಿದ್ದು, ಸಕಲ ಸಿದ್ಧತೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಗಡಿಭಾಗದ ಪ್ರವಾಸಿಗರು ಮಾತ್ರವಲ್ಲದೆ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಬರುತ್ತಿದ್ದು ರಾಜ್ಯದಲ್ಲಿ ಸೋಂಕು ಹರಡದಂತೆ ಮಂಗಳವಾರ ನಡೆಯುವ ತಾಂತ್ರಿಕ ಸಭೆಯಲ್ಲಿ ಚರ್ಚಿಸಲಾಗುವುದು.
ಗಡಿ ಭಾಗದ ಕೊಡಗು, ಮಂಗಳೂರು, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ನಿಗಾವಹಿಸ ಲಾಗುವುದು. ಪ್ರಸಕ್ತ ರಾಜ್ಯದಲ್ಲಿ ಸಹಜ ಸ್ಥಿತಿ ಇದೆ. ಹೆಚ್ಚಿನ ಸಂಖ್ಯೆ ಕಂಡು ಬಂದಲ್ಲಿ ನಿರ್ಬಂಧ ಕ್ರಮಕ್ಕೆ ಮುಂದಾ ಗುವುದಾಗಿ ಸಚಿವರು ತಿಳಿಸಿದರು.
ರಾಜ್ಯದ ಕೆಲವು ಕಡೆ ಭ್ರೂಣ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಇಂಥ ಪ್ರಕರಣ ತಡೆಗಟ್ಟಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಕಾರ್ಯಪಡೆ ರಚಿಸಲು ಚಿಂತಿಸಲಾಗಿದೆ ಎಂದರು.