ನಾಳೆ ಸುಬ್ರಹ್ಮಣ್ಯ ಷಷ್ಠಿ

ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಶ್ರೇಷ್ಠ ದಿನವಾದ ‘ಸುಬ್ಬರಾಯನ ಷಷ್ಠಿ’ ಅಥವಾ ‘ಸ್ಕಂದ ಷಷ್ಠಿ’ ಅಥವಾ ‘ಚಂಪಾ ಷಷ್ಠಿ’ ಅಥವಾ ‘ಸುಬ್ರಹ್ಮಣ್ಯ ರಾಜನ ಷಷ್ಠಿ’ಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ (ಶುದ್ಧ) ಷಷ್ಠಿ ತಿಥಿಯಂದು ಆಚರಿಸುತ್ತಾರೆ. ಈ ದಿನವನ್ನು ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವೆಂತಲೂ, ಆತನು ದೇವತೆಗಳ ಸೇನಾನಿ ಯಾದ ದಿನವೆಂತಲೂ, ಕುಮಾರ ಸ್ವಾಮಿ ದಕ್ಷ ಬ್ರಹ್ಮನ ಮಗಳಾದ ದೇವಸೇನೆಯ ವಿವಾಹವಾದ ದಿನವೆಂದೂ ಹೇಳಲಾಗುತ್ತದೆ.

ಕನ್ನಡ ನಾಡಿನಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ದೇವರ ಗುಡ್ಡ, ಮೈಲಾರ, ರಾಮನಾಥಪುರಗಳಲ್ಲಿ ಈ ದಿನ ಜಾತ್ರೆ - ಉತ್ಸವಗಳು ವಿಜೃಂಭಣೆಯಿAದ ಜರುಗುತ್ತವೆ.

ಸ್ಕಂದ, ಷಣ್ಮುಖ, ಕುಮಾರ, ಕಾರ್ತಿಕೇಯ, ಸುಬ್ರಹ್ಮಣ್ಯ ಮುಂತಾದ ನಾಮಧೇಯಗಳಿಂದ ಕರೆಯಲ್ಪಡುವ ಈ ಬಾಲ ದೇವನನ್ನು ಆರಾಧಿಸುವವರೆಲ್ಲರಿಗೂ ಈ ದಿನ ಮುಖ್ಯವಾದ ದಿನ. ಸ್ಕಂದನು ನಾಲ್ಕು ಪುರುಷಾರ್ಥಗಳನ್ನೂ ಅನುಗ್ರಹಿಸ ಬಲ್ಲ ಪರಾದೇವತೆ. ಆದರೂ ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಅಪಸ್ಮಾರ ಇತ್ಯಾದಿ ಕುಷ್ಟಾದಿ ಮಹಾ ರೋಗಗಳ ಪರಿಹಾರ, ಭೂತಪೀಡಾ ಪರಿಹಾರ, ಸಂತಾನ, ಸೌಭಾಗ್ಯ, ಪುಷ್ಟಿ, ತುಪ್ಪಿ, ಕೀರ್ತಿ, ಶತ್ರು ಜಯ ಮತ್ತು ಸ್ಕಂದ ಸೌಲೋಕ್ಯಗಳನ್ನು ವಿಶೇಷವಾಗಿ ಕರುಣಿಸುವವನು ಈ ಕುಮಾರ ಕಾರ್ತಿಕೇಯ ಸ್ವಾಮಿ. ಅಲ್ಲದೆ ನಾಗ ದ್ವೇಷಗಳನ್ನೂ ನೀಡುತ್ತಾನೆ.

ನಾವು ಈ ಹಿಂದೆ ಗಮನಿಸಿರು ವಂತೆ ಸುಬ್ರಹ್ಮಣ್ಯನನ್ನು ಸುಬ್ಬರಾಯನ ಷಷ್ಠಿ ಮತ್ತು ಅದರ ಹಿಂದಿನ ದಿನ ಎರಡೂ ದಿನಗಳಲ್ಲಿಯೂ ಪೂಜಿಸುವುದುಂಟು. ಅವನನ್ನು ನಾಗ (ಸರ್ಪ) ರೂಪದಲ್ಲಿಯೂ ಪೂಜಿಸುತ್ತಾರೆ. ಹಾಗೆಯೇ ಬ್ರಹ್ಮಚಾರೀ ಬಾಲಸುಬ್ರಹ್ಮಣ್ಯ ಮತ್ತು ದೇವಿ ಸಮೇತನಾಗಿ ಅನೇಕ ಶಕ್ತಿ ವಜ್ರಾಕುಂಶ ಆಯುಧಗಳಿಂದ ಕೂಡಿರುವ ಷಣ್ಮುಖಾದಿಯುಕ್ತ ದಿವ್ಯ ಗ್ರಹಸ್ಥ ಇತ್ಯಾದಿ ದೇವತಾ ಮೂರ್ತಿಗಳ ರೂಪದಲ್ಲಿ ಆರಾಧಿಸುವ ಕ್ರಮವೂ ಇದೆ.

ಹಾವಿನ ಹುತ್ತದಲ್ಲಿ ಅಥವಾ ಅಶ್ವತ್ಥ ಕಟ್ಟೆಯಲ್ಲಿರುವ ಸರ್ಪಾಕಾರ ವಿಗ್ರಹದಲ್ಲಿ ಸ್ವಾಮಿ ಸುಬ್ರಹ್ಮಣ್ಯನನ್ನು ಅವಾಹನೆ ಮಾಡಿ ಅವನಿಗೆ ಹಾಲಿನಿಂದ ಅಭಿಷೇಕ ಮಾಡಿ ಪಾಯಸಾದಿಗಳನ್ನು ನಿವೇದನೆ ಮಾಡಿ ಅಂದು ಏಕಭುಕ್ತ ಅಥವಾ ಉಪವಾಸ ವ್ರತವನ್ನು ಆಚರಿಸುತ್ತಾರೆ.

ಈ ಕ್ಷೀರಾಭಿಷೇಕವನ್ನು ನಮ್ಮಲ್ಲಿ ‘ತನಿ ಎರೆಯುವುದು’ ಎಂದು ಕರೆಯುತ್ತಾರೆ. ನಾಗದೇವತೆಗೆ ತನೀ ಎರೆದ ದಿವಸದಲ್ಲಿ ಬೇಯಿಸಿದ ಪದಾರ್ಥಗಳನ್ನು, ಉಪ್ಪು ಹಾಕಿದ ಪದಾರ್ಥಗಳನ್ನು ನೈವೇದ್ಯವಾಗಿ ಸಮರ್ಪಿಸುವುದಿಲ್ಲ. ಅವುಗಳನ್ನು ಪ್ರಸಾದವಾಗಿ ಸ್ವೀಕರಿಸುವುದೂ ಇಲ್ಲಿ. ಅಗ್ನಿಯ ಶಾಖದ ಸ್ಪರ್ಶವನ್ನೇ ನಾಗಪ್ಪನು ಸಹಿಸುವುದಿಲ್ಲ. ಅವನಿಗೆ ತಂಪಾದ ಮತ್ತು ಸಿಹಿಯಾದ ನೈವೇದ್ಯದಿಂದಲೇ ಸಂತೋಷವಾಗುತ್ತದೆ.

ಪAಚಮಿ ಮತ್ತು ಷಷ್ಠಿ ಎರಡು ದಿವಸಗಳಲ್ಲಿಯೂ ಬ್ರಹ್ಮಚರ್ಯವೇ ಮುಂತಾದ ವ್ರತ ನಿಯಮಗಳಿದ್ದು ಕುಮಾರಸ್ವಾಮಿಯನ್ನು ಪೂಜಿಸ ಬೇಕು. ಈ ದೇವರ ಪೂಜೆಯು ತುಂಬಾ ಮಡಿವಂತಿಕೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಬಗೆಯ ಅಶುಚಿಯ ಸ್ಪರ್ಶವನ್ನೂ ಸ್ವಾಮಿಯು ಸ್ವೀಕರಿಸುವುದಿಲ್ಲ.

ಷಣ್ಮುಖ ಸ್ವಾಮಿಯ ಪೂಜಾ ಕಲ್ಪದಲ್ಲಿ ‘ಆರು’ ಎಂಬ ಸಂಖ್ಯೆಗೆ ವಿಶೇಷ ಪ್ರಾಧಾನ್ಯವಿದೆ. ಅವನನ್ನು ಪೂಜಿಸುವ ತಿಥಿಯ ಷಷ್ಠಿ. ಅವನ ಮುಖಗಳು ಆರು. ಅವುಗಳಲ್ಲಿ ಮುಖ್ಯವಾದ ಶಕ್ತಿಗೆ ಷಷ್ಠಿ ಎಂದೇ ಹೆಸರು.

ಅವನಿಗೆ ಪ್ರಿಯವಾದ ನಾದಕ್ಕೆ ಷಷ್ಠೀನಾದ ಎಂದು ಹೆಸರು. ರಾಗಕ್ಕೆ ಷಣ್ಮುಖ ಪ್ರಿಯ ಎಂದು ಹೆಸರು. ಅವನ ಪೂಜೆಗೆ ಬಳಸಬೇಕಾದ ಪತ್ರ ಪುಷ್ಪ ಮತ್ತು ಅತೈಲಪಕ್ವವಾದ ‘ಆವಿಯಲ್ಲಿ’ ಬೇಯಿಸಿದ ಸಿಹಿ ಕಡುಬಿನ ನೈವೇದ್ಯ ಪದಾರ್ಥಗಳ ಸಂಖ್ಯೆಯೂ ಆರು.

ದೇವರ ಪೂಜೆಯ ನಂತರ ಕನಿಷ್ಟಪಕ್ಷ ಒಬ್ಬ ಬ್ರಹ್ಮಚಾರಿಯನ್ನು ಬಾಲಸುಬ್ರಹ್ಮಣ್ಯ ಸ್ವಾಮಿ ಎನ್ನುವ ಭಾವದಿಂದ ಪೂಜಿಸಿ, ಭೋಜನ, ವಸ್ತç, ದಕ್ಷಿಣೆಯಿಂದ ಸಂತೋಷ ಪಡಿಸಬೇಕು.

- ಹರೀಶ್ ಸರಳಾಯ, ಮಡಿಕೇರಿ.