ಪೊನ್ನಂಪೇಟೆ, ಡಿ. ೧೬: ತಿತಿಮತಿ ಸಮೀಪದ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಸಾಕಾನೆ ವೀಕ್ಷಣಾ ಕೇಂದ್ರ ವಿರುದ್ಧ ವಿರೋಧ ವ್ಯಕ್ತಪಡಿಸಿರುವ ಕೊಡಗು ರೈತ ಸಂಘ, ಕೂಡಲೇ ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದೆ. ಗೋಣಿಕೊಪ್ಪಲು-ಹುಣಸೂರು ಹೆದ್ದಾರಿ ಬದಿಯಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರದ ಆವರಣದಲ್ಲಿ ಈಗಾಗಲೇ ಸಿದ್ದಗೊಂಡಿರುವ ವೀಕ್ಷಣೆ ಕೇಂದ್ರ ಆರಂಭಗೊAಡಲ್ಲಿ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುತ್ತದೆ. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಜನರಿಗೆ ಸಮಸ್ಯೆಯಾಗುವುದನ್ನು ರೈತ ಸಂಘ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.

ಈ ಕುರಿತು ತಿತಿಮತಿಯ ಅರಣ್ಯ ಇಲಾಖೆ ಸರಕಾರಿ ಅತಿಥಿಗೃಹದ ಆವರಣದಲ್ಲಿ ಶುಕ್ರವಾರ ನಡೆದ ಅರಣ್ಯ ಇಲಾಖೆ ಅಧಿಕಾರಿಗಳ, ರೈತ ಸಂಘದ ಪದಾಧಿಕಾರಿಗಳ ಮತ್ತು ಸ್ಥಳೀಯ ಬೆಳೆಗಾರರ ಸಮಾಲೋಚನಾ ಸಭೆಯಲ್ಲಿ ಮತ್ತಿಗೋಡಿನ ಅರಣ್ಯ ಇಲಾಖೆ ಆರಂಭಿಸಲು ಮುಂದಾಗಿರುವ ಸಾಕಾನೆ ವೀಕ್ಷಣಾ ಕೇಂದ್ರದ ವಿರುದ್ಧ ಆಕ್ಷೇಪಣೆ ಕೇಳಿಬಂತು.

ಸಭೆ ಆರಂಭದಲ್ಲಿ ಮಾತನಾಡಿದ ರೈತ ಸಂಘದ ಪ್ರಮುಖರು, ಉದ್ದೇಶಿತ ಈ ಕೇಂದ್ರ ಮುಖ್ಯ ಹೆದ್ದಾರಿಯ ಬದಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಮುಕ್ತಗೊಂಡರೆ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲದೆ, ವೀಕ್ಷಣಾ ಕೇಂದ್ರಕ್ಕೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳವಿಲ್ಲದಿರುವುದರಿಂದ ರಸ್ತೆ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲುಗಡೆಗೊಳಿಸಬೇಕಾಗುತ್ತದೆ. ಇದರಿಂದ ಈ ವನ್ಯಜೀವಿ ವಲಯದಲ್ಲಿ ವಾಹನ ಸಂಚಾರ ಇನ್ನಷ್ಟು ಹೆಚ್ಚಾಗುತ್ತದೆ. ವನ್ಯಜೀವಿ ವಲಯದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಈ ಹೆದ್ದಾರಿಯಲ್ಲಿ ಈ ಹಿಂದೆ ಸಾಕಾನೆ ಮತ್ತು ಕಾಡುಕೋಣಗಳಿಗೆ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ ಕಾರಣ ನ್ಯಾಯಾಲಯದ ನಿರ್ದೇಶನದಂತೆ ತಿತಿಮತಿಯಿಂದ ಅಲ್ಲೂರಿನವರೆಗೆ ೨೩ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಆಗಿದ್ದರೂ ಈ ಹೆದ್ದಾರಿಯಲ್ಲಿ ಸಾಕಾನೆ ವೀಕ್ಷಣಾ ಕೇಂದ್ರವನ್ನು ಮಾಡುತ್ತಿರುವ ಅಗತ್ಯವಾದರೂ ಏನು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಚೆಪ್ಪುಡಿರ ರಾಮಕೃಷ್ಣ, ಆನೆಚೌಕೂರು ವಲಯದ ಮತ್ತಿಗೋಡಿನಲ್ಲಿ ಸ್ಥಾಪಿಸಲಾಗಿರುವ ಸಾಕಾನೆ ಶಿಬಿರವೇ ವೈಜ್ಞಾನಿಕವಾಗಿಲ್ಲ. ದುಬಾರೆ ಸಾಕಾನೆ ಶಿಬಿರದಂತೆ ಇಲ್ಲಿ ನೀರಿನ ಸೌಲಭ್ಯಗಳಿಲ್ಲ. ಮತ್ತಿಗೋಡು ಅರಣ್ಯ ವ್ಯಾಪ್ತಿಯಲ್ಲಿ ಹಸಿರುಕಾಡನ್ನೇ ಕಾಣಲು ಸಾಧ್ಯವಿಲ್ಲ. ಇಲ್ಲಿ ೩೪ ರಿಂದ ೩೮ ಡಿಗ್ರಿ ತಾಪಮಾನವಿರುತ್ತದೆ. ಹೀಗಿರುವಾಗ ಶಿಬಿರದ ಆವರಣದಲ್ಲಿ ಸಾಕಾನೆ ವೀಕ್ಷಣ ಕೇಂದ್ರವನ್ನು ಸ್ಥಾಪಿಸುವುದು ಯಾವ ಪರಿಸರ ಪ್ರವಾಸೋದ್ಯಮಕ್ಕೆ ಪೂರಕ? ಎಂದು ಕೇಳಿದರು.

ದೇವರಪುರದ ಬೆಳೆಗಾರ ಅಮ್ಮತ್ತಿರ ಕೆ. ಗಣೇಶ್ ಕುಮಾರ್ ಮಾತನಾಡಿ, ಸಾಕಾನೆ ವೀಕ್ಷಣೆ ಕೇಂದ್ರದಿAದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಈ ಕುರಿತು ಸಮಜಾಯಿಸಿಕೆ ನೀಡಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಮತ್ತಿಗೋಡು ಸಾಕಾನೆ ಶಿಬಿರದ ಆವರಣದಲ್ಲಿ ಯಾವುದೇ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ. ರಾಜ್ಯಾದ್ಯಂತ ಇರುವ ಸಾಕಾನೆ ಶಿಬಿರಗಳನ್ನು ಉನ್ನತೀಕರಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದಂತೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಕೈಗೊಳ್ಳಲಾಗಿದೆ. ಸಾಕಾನೆಗಳಿಗೆ ಆಹಾರ ತಯಾರಿಸುವ ಕೊಠಡಿ, ಸ್ನಾನದ ಕೊಳ ಮೊದಲಾದವುಗಳ ಜೊತೆಗೆ ಸಾರ್ವಜನಿಕರಿಗೆ ಬೆಳಿಗ್ಗೆ ಮತ್ತು ಸಂಜೆ ಸಾಕಾನೆಗಳನ್ನು ಹತ್ತಿರದಿಂದ ನೋಡಲು ಕೇವಲ ಗ್ಯಾಲರಿಯನ್ನು ಮಾತ್ರ ನಿರ್ಮಿಸಲಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ಸಾರ್ವಜನಿಕರು ಆನೆಗಳನ್ನು ನೋಡಲು ಅವಕಾಶ ಕಲ್ಪಿಸಬೇಕೆಂಬುದು ಮನವಿ ಸಲ್ಲಿಸಿರುವ ಕಾರಣ ಇಲಾಖೆ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.

ಮತ್ತಿಗೋಡು ಸಾಕಾನೆ ಶಿಬಿರದ ಆವರಣದಲ್ಲಿ ಯಾವುದೇ ಸಫಾರಿ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಇಲಾಖೆಗಿಲ್ಲ. ಈ ಹಿಂದೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದ ಮಜ್ಜಿಗೆಹಳ್ಳ ಸಫಾರಿ ಕೇಂದ್ರದ ಪ್ರಸ್ತಾಪವನ್ನು ಕೈ ಬಿಡಲಾಗಿದೆ. ಅಲ್ಲದೆ ಸೂಕ್ಷö್ಮ ಪರಿಸರ ವಲಯಕ್ಕೆ ಸಂಬAಧಿಸಿದAತೆ ಯಾವುದೇ ಹೊಸ ಪ್ರಸ್ತಾಪ ಸರ್ಕಾರದಿಂದ ಸಲ್ಲಿಕೆಯಾಗಿಲ್ಲ. ಅರಣ್ಯದಂಚಿನ ೧೦ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೇರಿಸುವ ಯಾವುದೇ ಉದ್ದೇಶ ಸರಕಾರದ ಮುಂದಿಲ್ಲ. ಕೇವಲ೧.೫ಕಿ.ಮೀ. ವ್ಯಾಪ್ತಿಯನ್ನು ಮಾತ್ರ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿಸುವ ಪ್ರಸ್ತಾಪ ಸರಕಾರದ ಮಟ್ಟದಲ್ಲಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಆನೆಚೌಕೂರು ವನ್ಯಜೀವಿ ವಲಯದ ಮೂಲಕ ಹಾದುಹೋಗುವ ಪಿಡಬ್ಲ್ಯೂಡಿ ಇಲಾಖೆಯ ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ ವಾಹನಗಳನ್ನು ನಿಲುಗಡೆಗೊಳಿಸದಂತೆ ಎರಡು ಬದಿಗಳಲ್ಲಿ ಮರದ ದಿಮ್ಮಿಗಳನ್ನು ಹಾಕಿದ್ದಾರೆ. ಇದರಿಂದ ಸಾಕಷ್ಟು ವಾಹನಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ರೈತರು ಸಭೆಯಲ್ಲಿ ಒತ್ತಾಯಿಸಿದಾಗ, ಇದಕ್ಕೆ ಸ್ಪಂದಿಸಿದ ಹರ್ಷಕುಮಾರ್ ಚಿಕ್ಕನರಗುಂದ ಈ ಕುರಿತು ಸಂಬAಧಿಸಿದವರಿಗೆ ಸೂಚನೆ ನೀಡಿ ಕೂಡಲೇ ಅವುಗಳನ್ನು ತೆರವುಗೊಳಿಸಲಾಗುವುದು ಎಂದರು.

ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಅರಣ್ಯದಂಚಿನ ಅಗತ್ಯ ಸ್ಥಳಗಳಲ್ಲಿ ವೈಜ್ಞಾನಿಕವಾದ ರೈಲ್ವೆ ಬ್ಯಾರಿಕೇಡುಗಳನ್ನು ಅಳವಡಿಸಿ ಕಾಡಾನೆಗಳು ನಾಡಿಗೆ ಬರದಂತೆ ತಡೆಯಬೇಕು, ರೈಲ್ವೆ ಬ್ಯಾರಿಕೇಡುಗಳನ್ನು ಅಳವಡಿಸಲು ಕಾಲಾವಕಾಶ ಬೇಕಾಗಿರುವುದರಿಂದ ತಕ್ಷಣದಲ್ಲಿ ಆನೆಗಳ ಹಾವಳಿಯನ್ನು ತಡೆಗಟ್ಟಲು ವೈಜ್ಞಾನಿಕ ರೂಪದ ಆನೆ ಕಂದಕವನ್ನು ನಿರ್ಮಿಸಬೇಕು ಅವರು ಒತ್ತಾಯಿಸಿದರು.

ರೇಡಿಯೋ ಕಾಲರ್‌ಗಳನ್ನು ಅಳವಡಿಸಿದ ಕಾಡಾನೆಗಳು ಮತ್ತೆ ಅದೇ ಸ್ಥಳಕ್ಕೆ ವಾಪಾಸು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಗಳ ಚಲನ ವಲನಗಳನ್ನು ಸುಲಭವಾಗಿ ತಿಳಿಯಬಹುದಾದ್ದರಿಂದ ಅವುಗಳು ಅರಣ್ಯದಂಚಿನಿAದ ತೋಟದತ್ತ ಬರುವಾಗ ಸ್ಥಳೀಯ ಬೆಳಗಾರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸಿದರೆ ಸುಲಭವಾಗುತ್ತದೆ. ಅರಣ್ಯ ಇಲಾಖೆ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಾಡಾನೆಗಳ ಚಲನವಲಗಳ ನಿಗಾವಹಿಸಿ ಬೆಳಗಾರಿಗೆ ಸಕಾಲದಲ್ಲಿ ಮಾಹಿತಿ ನೀಡಿದರೆ ಮಾತ್ರ ರೈತರ ಮತ್ತು ಕಾರ್ಮಿಕರ ಪ್ರಾಣ ಉಳಿಸಬಹುದಾಗಿದೆ. ಇದರಿಂದ ರೈತರ ಬೆಳೆಯೂ ಉಳಿಯುತ್ತದೆ ಎಂದ ಮನು ಸೋಮಯ್ಯ, ಅರಣ್ಯ ಇಲಾಖೆ ಕಾಡಿನಂಚಿನಲ್ಲಿ ಅಗತ್ಯವಿರುವ ವೀಕ್ಷಣಾ ಗೋಪುರಗಳನ್ನು ಸ್ಥಾಪಿಸಿ ಕಾಡಾನೆಗಳು ನಾಡಿಗೆ ಬರದಂತೆ ಆರ್.ಆರ್.ಟಿ. ಸಿಬ್ಬಂದಿಗಳನ್ನು ಕಾಡಿನಂಚಿನಲ್ಲೇ ಕರ್ತವ್ಯನಿರ್ವಹಿಸಲು ಸೂಚಿಸಬೇಕು ಎಂದು ಸಲಹೆ ನೀಡಿದರು.

ಅರಣ್ಯ ಇಲಾಖೆ ಇದೀಗ ನಿರ್ಮಿಸುತ್ತಿರುವ ಆನೆ ಕಂದಕ ವೈಜ್ಞಾನಿಕವಾಗಿಲ್ಲ ಎಂದು ಸಭೆಯಲ್ಲಿದ್ದ ಅಮ್ಮತ್ತೀರ ಗಣೇಶ್ ಕುಮಾರ್ ವಿವರಿಸಿದರು.

ಸಭೆಯಲ್ಲಿ ಹುಣಸೂರು ವನ್ಯಜೀವಿ ಉಪವಿಭಾಗದ ಎಸಿಎಫ್ ದಯಾನಂದ್, ನಾಗರಹೊಳೆ ವನ್ಯಜೀವಿ ಉಪವಿಭಾಗದ ಎಸಿಎಫ್ ಅನುಷಾ, ನಾಗರಹೊಳೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಜಿಷಾನ್, ಆನೆಚೌಕೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಮಣಿ, ರೈತ ಸಂಘದ ಪ್ರಮುಖರಾದ ಸಿ.ಎಂ. ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್, ಹಿರಿಯ ವಕೀಲ ಹೇಮಚಂದ್ರ, ಚೆಪ್ಪುಡೀರ ಕಾರ್ಯಪ್ಪ ಸೇರಿದಂತೆ ರೈತ ಸಂಘದ ಪ್ರಮುಖರು, ವಿವಿಧ ಘಟಕದ ಪದಾಧಿಕಾರಿಗಳು, ವಿವಿಧ ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

- ರಫೀಕ್ ತೂಚಮಕೇರಿ