ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ, ಡಿ. ೧೬: ಮಂಗಳೂರು ವಿಶ್ವವಿದ್ಯಾಲಯದ ೪೦ ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯದ ಪುರುಷರ ಫುಟ್ಬಾಲ್ ತಂಡ ದಕ್ಷಿಣ ಪೂರ್ವ ಅಂತರ ವಿಶ್ವವಿದ್ಯಾಲಯದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆದು ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಫುಟ್ಬಾಲ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ. ಮಂಗಳೂರು ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದ ೧೮ ಮಂದಿಯ ಪೈಕಿ ೧೨ ಮಂದಿ ಕೊಡಗಿನವರಾಗಿರುವುದು ವಿಶೇಷವಾಗಿದೆ.
ಮಂಗಳೂರಿನ ಯೆನಪೋಯ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ ೧೧ ರಿಂದ ೧೫ ವರೆಗೆ ದಕ್ಷಿಣ ಪೂರ್ವ ಅಂತರ ವಿಶ್ವವಿದ್ಯಾಲಯಗಳ ನಡುವಿನ ಫುಟ್ಬಾಲ್ ಪಂದ್ಯಾವಳಿ ಆಯೋಜನೆಗೊಂಡಿತ್ತು. ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಖ್ಯಾತ ೫೬ ವಿಶ್ವವಿದ್ಯಾಲಯಗಳ ತಂಡಗಳು ಭಾಗವಹಿಸಿದ್ದವು.
ಪೂಲ್ ‘ಎ’ ನಲ್ಲಿ ಮೊದಲ ಸ್ಥಾನ ಪಡೆಯುವುದರ ಮೂಲಕ ಮಂಗಳೂರು ವಿಶ್ವವಿದ್ಯಾಲಯವು ಮೊದಲ ಬಾರಿಗೆ ಲೀಗ್ ಹಂತದ ಪಂದ್ಯಾವಳಿಗೆ ಆಯ್ಕೆಯಾಗಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಫುಟ್ಬಾಲ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ. ಮಂಗಳೂರಿನ ಯೆನಪೋಯ ವಿಶ್ವವಿದ್ಯಾಲಯದಲ್ಲಿ ನಡೆದ ಪಂದ್ಯಾವಳಿಯಲ್ಲಿ
(ಮೊದಲ ಪುಟದಿಂದ) ಮಂಗಳೂರು ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯದ ವಿರುದ್ಧ ೭-೦, ಸಂತ ಜೋಸೆಫ್ ವಿಶ್ವವಿದ್ಯಾಲಯ ಬೆಂಗಳೂರು ವಿರುದ್ಧ ೭-೨, ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿರುದ್ಧ ೩-೧ ಗೋಲುಗಳ ಅಂತರದಿAದ ಗೆಲುವು ಸಾಧಿಸುವುದರ ಮೂಲಕ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು, ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪಂದ್ಯಾವಳಿಗೆ ಆಯ್ಕೆಯಾಗಿದೆ.
ದಕ್ಷಿಣ ಪೂರ್ವ ಇಂಟರ್ ಯೂನಿವರ್ಸಿಟಿ ಕಾಲ್ಚೆಂಡು ಪಂದ್ಯಾವಳಿಯಲ್ಲಿ ‘ಎ’ ಗುಂಪಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ, ‘ಬಿ’ ಗುಂಪಿನಲ್ಲಿ ಹೆಮ್ಚಂದ್ ವಿಶ್ವವಿದ್ಯಾಲಯ ಛತ್ತೀಸ್ಗಡ, ‘ಸಿ’ ಗುಂಪಿನಲ್ಲಿ ಒಸ್ಮಾನಿಯ ವಿಶ್ವವಿದ್ಯಾಲಯ ಹೈದರಾಬಾದ್, ಹಾಗೂ ‘ಡಿ’ ಗುಂಪಿನಲ್ಲಿ ಯೆನಪೋಯ ವಿಶ್ವವಿದ್ಯಾಲಯ ತಂಡಗಳು ಕ್ರಮವಾಗಿ ಮೊದಲ ಸ್ಥಾನ ಪಡೆದು ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ.
ಪ್ರತೀ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡಗಳ ನಡುವೆ ಸೌತ್-ಈಸ್ಟ್ ಯೂನಿವರ್ಸಿಟಿ ಚಾಂಪಿಯನ್ ಪಟ್ಟಕ್ಕಾಗಿ ನಡೆದ ಲೀಗ್ ಪಂದ್ಯದಲ್ಲಿ ಆತಿಥೇಯ ಯೆನಪೋಯ ವಿಶ್ವವಿದ್ಯಾಲಯ ಚಾಂಪಿಯನ್ ಪಟ್ಟ ಪಡೆದಿದೆ. ದ್ವಿತೀಯ ಸ್ಥಾನವನ್ನು ಹೆಮ್ಚಂದ್ ವಿಶ್ವವಿದ್ಯಾಲಯ ಯೂನಿವರ್ಸಿಟಿ ಛತ್ತೀಸ್ಗಢ, ತೃತೀಯ ಸ್ಥಾನವನ್ನು ಮಂಗಳೂರು ಯೂನಿವರ್ಸಿಟಿ, ಹಾಗೂ ನಾಲ್ಕನೇ ಸ್ಥಾನವನ್ನು ಒಸ್ಮಾನಿಯ ಯೂನಿವರ್ಸಿಟಿ ಹೈದರಾಬಾದ್ ತಂಡ ಪಡೆದಿಕೊಂಡಿವೆ.
ಕೊಡಗಿನ ೧೨ ಆಟಗಾರರು: ಪ್ರತಿ ಬಾರಿ ಮಂಗಳೂರು ವಿಶ್ವವಿದ್ಯಾಲಯದ ಫುಟ್ಬಾಲ್ ತಂಡದಲ್ಲಿ ಕೊಡಗಿನ ಆಟಗಾರರದ್ದೇ ಮೇಲುಗೈ. ಮಂಗಳೂರು ಯೂನಿವರ್ಸಿಟಿ ಫುಟ್ಬಾಲ್ ತಂಡಕ್ಕೆ ಕೊಡಗಿನ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಬಹುತೇಕ ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಮಂಗಳೂರು ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಫುಟ್ಬಾಲ್ ತಂಡದ ಶಕ್ತಿ ಕೊಡಗಿನ ಆಟಗಾರರಾಗಿದ್ದಾರೆ.
ಮಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾಭ್ಯಾಸ ಪಡೆಯುತ್ತಿರುವ ಕೊಡಗಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ. ತಂಡದಲ್ಲಿನ ೧೮ ಆಟಗಾರರ ಪೈಕಿ ಕೊಡಗಿನ ೧೨ ಆಟಗಾರರು ಭಾಗವಹಿಸಿದ್ದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ಸಾಧಿಕ್ ಎಂ.ಎಸ್, ಉಸಾಮ ಎಸ್.ಎಸ್ ಹಾಗೂ ಅಜಿತ್ ಎಂ.ಎಸ್, ಸಿದ್ದಾಪುರ ನಿವಾಸಿಯಾದ ನಾಲ್ಕನೇ ಬಾರಿ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸುತ್ತಿರುವ ಹಾಗೂ ಒಂದು ಬಾರಿ ನಾಯಕ ಸ್ಥಾನವನ್ನು ಅಲಂಕರಿಸಿದ್ದ ಪ್ರಸ್ತುತ ಮಂಗಳೂರಿನಲ್ಲಿರುವ ವಿದ್ಯಾರ್ಥಿ ಧೀರಜ್ ಶ್ರೀನಿವಾಸ್, ಬೆಳ್ತಂಗಡಿಯ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಓದುತ್ತಿರುವ ಕೊಡಗಿನವರಾದ ೩ನೇ ಬಾರಿ ಪ್ರತಿನಿಧಿಸುತ್ತಿರುವ ವಿನು ಹೆಚ್.ಆರ್, ಎರಡನೇ ಬಾರಿ ಸ್ಥಾನ ಪಡೆದ ದೀಕ್ಷಿತ್ ಹೆಚ್.ಜಿ, ಎರಡನೇ ಬಾರಿ ಸ್ಥಾನ ಪಡೆದ ಅನ್ಸಾರ್ ಎಂ.ಹೆಚ್, ಎರಡನೇ ಬಾರಿ ಸ್ಥಾನ ಪಡೆದ ಗೋಣಿಕೊಪ್ಪದ ಪಿ.ಎ ತನ್ವೀರ್(ಚಿನ್ನು), ಮೊದಲ ಬಾರಿ ಸ್ಥಾನ ಪಡೆದ ಮೂರ್ನಾಡುವಿನ ರಾಜೇಶ್ ಟಿ.ಎಮ್, ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಬಿ.ಪೆಡ್ ಶಿಕ್ಷಣ ಪಡೆಯುತ್ತಿರುವ ಎರಡನೇ ಬಾರಿ ಸ್ಥಾನ ಪಡೆದ ಪಾಲಿಬೆಟ್ಟದ ಸೋಲಮನ್ ರೋಶನ್ ಜೋಸೆಫ್, ಮೂರನೇ ಬಾರಿ ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸುತ್ತಿರುವ ಮಾಜಿ ನಾಯಕ ಪಾಲಿಬೆಟ್ಟದ ನವೀನ್ ಎಚ್.ಆರ್ (ದ್ರೋಣ) ಹಾಗೂ ಮೂರನೇ ಬಾರಿ ಸ್ಥಾನ ಪಡೆದ ತಂಡದ ನಾಯಕ ಹೊಲಮಾಳದ ಪವನ್ ತಂಡವನ್ನು ಪ್ರತಿನಿಧಿಸಿದ್ದರು.
ಕೋಚ್ ಕೂಡ ಕೊಡಗಿನವರೆ: ೧೮ ಆಟಗಾರರಿಗೆ ತರಬೇತಿ ನೀಡಿ ಕೋಚ್ ಆಗಿ ಕಾರ್ಯನಿರ್ವಹಿಸಿರುವುದು ಕೂಡ ಕೊಡಗಿನ ಖ್ಯಾತ ಹಿರಿಯ ಫುಟ್ಬಾಲ್ ಆಟಗಾರ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ವೀರಾಜಪೇಟೆ ತಾಲೂಕಿನ ಅಮ್ಮತ್ತಿಯ ಎ.ಎಸ್. ಸಿರಾಜ್ ಆಗಿದ್ದಾರೆ.