ಮಡಿಕೇರಿ, ಡಿ. ೧೬: ನಗರದ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ತಾ.೧೮ ರಂದು ಷಷ್ಠಿ ಮಹೋತ್ಸವ ನಡೆಯ ಲಿದೆ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂಸೇವೆ, ಪಂಚಕಜ್ಜಾಯ ಸೇವೆ, ಹಣ್ಣುಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾಪೂಜೆಗಳು ನಡೆಯಲಿವೆ. ಬೆಳಿಗ್ಗೆ ೯ ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ೧೦ ಗಂಟೆಗೆ ಶ್ರೀ ಗುಳಿಗ ದೇವರ ವೆಳ್ಳಾಟಂ, ೧೦.೩೦ ಗಂಟೆಗೆ ಶ್ರೀ ಪೋದಿ ದೇವರ ವೆಳ್ಳಾಟಂ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದು ಸುಧೀರ್ ತಿಳಿಸಿದರು. ಅಂದು ಸಂಜೆ ೬ ಗಂಟೆಗೆ ಭಜನಾ ಕಾರ್ಯಕ್ರಮ, ೭ ಗಂಟೆಗೆ ರಂಗ ಪೂಜೆ, ೮ ಗಂಟೆಗೆ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ನಾಗದೇವರಿಗೆ ಬೆಳಿಗ್ಗೆ ೭ ಗಂಟೆಯಿAದ ಮಧ್ಯಾಹ್ನ ೧೨ರವರೆಗೆ ಕ್ಷೀರಾಭಿಷೇಕ ಮತ್ತು ಎಳನೀರು ಅಭಿಷೇಕ ನಡೆಯಲಿದೆ. ನಾಗದೋಷ ಪರಿಹಾರಕ್ಕಾಗಿ ನಾಗನಬೆಳ್ಳಿ ಹೆಡೆ, ಮೊಟ್ಟೆಯ ವ್ಯವಸ್ಥೆಯೂ ದೇವಾಲಯದಲ್ಲಿ ಲಭ್ಯವಿರುತ್ತದೆ. ಶೇಷ ಸೇವೆ ಎಂಬ ವಿಶೇಷ ಪೂಜೆ ಕೂಡ ನಡೆಯಲಿದೆ ಎಂದು ಅವರು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ದೇವಾಲಯ ಧರ್ಮದರ್ಶಿ ಕೆ.ಎಸ್. ರಮೇಶ್, ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ ಅಧ್ಯಕ್ಷ ಪಿ. ವಿನೋದ್, ದೇವಾಲಯ ಸಮಿತಿ ಉಪಾಧ್ಯಕ್ಷರಾದ ಗಿರೀಶ್ ಆರಾಧನ, ಮುತ್ತಪ್ಪ ಮಹಿಳಾ ವೇದಿಕೆ ಉಪಾಧ್ಯಕ್ಷೆ ದೀಪಾ ಕಾವೇರಪ್ಪ, ಪ್ರಮುಖರಾದ ಸದಾಶಿವಶೆಟ್ಟಿ ಉಪಸ್ಥಿತರಿದ್ದರು.