ವೀರಾಜಪೇಟೆ, ಡಿ. ೧೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವೀರಾಜಪೇಟೆ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೆದಮುಳ್ಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಕೆದಮುಳ್ಳೂರು ಸಂಘದ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳು ನಡೆದವು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸಲಾಗುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು, ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನ ವಿಕಾಸ ಕಾರ್ಯಕ್ರಮಗಳು, ವಿಪತ್ತು ನಿರ್ವಹಣೆ ಕಾರ್ಯಕ್ರಮ, ಮಾಸಾಶನ, ನಮ್ಮೂರು ನಮ್ಮ ಕೆರೆ, ಜನಮಂಗಲ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಸವರಾಜು ಧಾರ್ಮಿಕ ಉಪನ್ಯಾಸ ನೀಡಿದರು. ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ.ಎಸ್. ಅರುಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳೇಟಿರ ಜಫ್ರಿ ಉತ್ತಪ್ಪ, ತೋರಾದ ಪ್ರಗತಿಪರ ಕೃಷಿಕ ಕೆ.ಡಿ. ಪ್ರಭುಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ದಿನೇಶ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮೀನಾಕ್ಷಿ, ಜಯಂತಿ, ಕೆ.ಎಂ. ರಾಮಯ್ಯ ಉಪಸ್ಥಿತರಿದ್ದರು. ವೀರಾಜಪೇಟೆ ವಲಯ ಮೇಲ್ವಿಚಾರಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಸುನಿತಾ ವಂದಿಸಿದರು.