ಕೂಡಿಗೆ, ಡಿ. ೧೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಘಟಕದ ಆವರಣದಲ್ಲಿರುವ ಸೋಮವಾರಪೇಟೆ, ಕುಶಾಲನಗರ ತಾಲೂಕು ವ್ಯಾಪ್ತಿಯ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರಕ್ಕೆ (ಎಂ.ಎಸ್.ಪಿ.ಸಿ.) ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರದಲ್ಲಿ ಎರಡು ತಾಲೂಕು ವ್ಯಾಪ್ತಿಯ ಅಂಗನವಾಡಿ ಮತ್ತು ಬಾಣಂತಿ ಮಹಿಳೆಯರಿಗೆ ನೀಡುವ ಪೌಷ್ಟಿಕ ಆಹಾರ ವಿತರಣೆಗೆ ಸಿದ್ಧತೆ ಮಾಡುವ ಕೇಂದ್ರದ ವಸ್ತುಗಳನ್ನು ಪರಿಶೀಲನೆ ನಡೆಸಿದರು.

ಕೇಂದ್ರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ಮತ್ತು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವಂತೆ ಅಲ್ಲಿನ ಸಿಬ್ಬಂದಿಗಳಿಗೆ ಅಧ್ಯಕ್ಷರು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯ ಕೆ.ಕೆ. ಭೋಗಪ್ಪ, ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಕೆ.ಜಿ. ವಿಮಲ, ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಜರಿದ್ದರು.