ಮಡಿಕೇರಿ, ಡಿ.೧೫ : ವಿಶ್ವ ರಾಷ್ಟç ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ೧೪ನೇ ವರ್ಷದ ತೋಕ್‌ನಮ್ಮೆಯನ್ನು ತಾ.೧೮ ರಂದು ನಾಪೋಕ್ಲು ಕೊಳಕೇರಿಯ ನೂರಂಬ ನಾಡ್‌ನಲ್ಲಿ ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಪದೀಯ ಹಬ್ಬವಾಗಿ ತೋಕ್ ನಮ್ಮೆಯನ್ನು ಅತಿ ಉತ್ಸಾಹದಿಂದ ಆಚರಿಸುವ ಮೂಲಕ ಕೋವಿ ಹೊಂದುವ ಕೊಡವರ ಹಕ್ಕನ್ನು ಪ್ರತಿಪಾದಿಸಲಾಗುವುದು ಎಂದಿದ್ದಾರೆ.

ಕೊಳಕೇರಿಯ ನೂರಂಬಡ ನಾಡ್‌ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್‌ನಲ್ಲಿ ನಮ್ಮೆ ನಡೆಯಲಿದೆ. ಕೋವಿಗಳನ್ನು ಸಾಂಪ್ರದಾಯಿಕ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಗುಂಡು ಹಾರಿಸುವ ಸ್ಪರ್ಧೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕಲೆ, ಶಿಲ್ಪ ಕಲೆ, ಕೊಡವ ಸಾಹಿತ್ಯ, ಪತ್ರಿಕೋದ್ಯಮ, ಸಾಮಾಜಿಕ, ಶಿಕ್ಷಣ, ಕೃಷಿ, ಉದ್ಯಮಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ "ಕೊಡವ ವಿಭೂಷಣ" ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.