*ಗೋಣಿಕೊಪ್ಪಲು, ಡಿ. ೧೪: ಹೆಣ್ಣು ತನ್ನ ಬಲ, ಆತ್ಮವಿಶ್ವಾಸ, ಬದುಕುವ ಸೌಂದರ್ಯಕ್ಕಾಗಿ ಶಿಕ್ಷಣ ವಂತಳಾಗಬೇಕು ಎಂದು ಪೊನ್ನಂಪೇಟೆ ಕೆಪಿಎಸ್ ಶಾಲೆಯ ಉಪಾಧ್ಯಾಯಿನಿ ನಳಿನಿ ಕರೆ ನೀಡಿದರು.
ಪೊನ್ನಂಪೇಟೆಯ ಪದವಿಪೂರ್ವ ಕಾಲೇಜು ಕೆಪಿಎಸ್ ಪ್ರೌಢಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಕರ್ನಾಟಕ ಪಬ್ಲಿಕ್ ಶಾಲೆ, ಪೊನ್ನಂಪೇಟೆ ಆಶ್ರಯದಲ್ಲಿ ನಡೆದ ದಿ. ಸೀತಾಬಾಯಿ ಮತ್ತು ರಾಮಚಂದ್ರ ಕಾಮತ್ ದತ್ತಿನಿಧಿಯ "ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ" ವಿಚಾರವಾಗಿ ಉಪನ್ಯಾಸ ನೀಡಿದರು.
ಹೆಣ್ಣು ಮಕ್ಕಳು ಶಿಕ್ಷಣವಂತರಾದರೆ ಮುಂದಿನ ಭಾರತದ ಭವಿಷ್ಯ ಸುಭಿಕ್ಷವಾಗಿರುತ್ತದೆ. ಹೆಣ್ಣು ಹೆಚ್ಚು ಕಲಿತಂತೆ ಶಿಸ್ತುಬದ್ಧ ಜೀವನ ಮತ್ತು ಕೌಟುಂಬಿಕ ಬದುಕಿನಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗಬಲ್ಲದು. ಯಾವ ನೆಲದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯಗಳು ನಡೆಯುವುದಿಲ್ಲವೋ ಆ ಭೂಮಿ ಅಭಿವೃದ್ಧಿ ಕಾಣುತ್ತದೆ ಎಂದು ಪ್ರತಿಪಾದಿಸಿದರು. ಈ ಮೂಲ ಉದ್ದೇಶವನ್ನು ಇಟ್ಟುಕೊಂಡೆ ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣವಂತರಾಗಬೇಕು ಎಂಬ ಬಲವಾದ ಕಾರಣದಿಂದ ಸರ್ಕಾರ ಹಲವಾರು ಯೋಜನೆಗಳನ್ನ ರೂಪಿಸುತ್ತಿದೆ. ಇದರ ಬಳಕೆಯೊಂದಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಪೊನ್ನಂಪೇಟೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶು ಪಾಲ ರಮೇಶ್, ಶಿಕ್ಷಣದ ಮೌಲ್ಯವನ್ನು ತಿಳಿದುಕೊಂಡಾಗ ಬದುಕು ಹಸನಾಗುತ್ತದೆ. ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮತ್ತು ಮನುಷ್ಯ ಜೀವನವನ್ನು ಸುಂದರ ಕಾಣಿಸಲು ಶಿಕ್ಷಣದ ಪ್ರಾಮುಖ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು ಎಂದು ತಿಳಿಸಿದರು. ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಅಧ್ಯಕ್ಷ ನುಡಿಗಳಲ್ಲಿ, ಮಾತೃಭಾಷೆ ಯಾವುದೇ ಆಗಿದ್ದರೂ ಸಮಾಜದಲ್ಲಿ ಚಂದ ಕಾಣುವ ಕನ್ನಡವನ್ನು ಹೆಚ್ಚು ಮಾತನಾಡುವ ಮೂಲಕ ಕನ್ನಡದ ಉಳಿಯು ಮತ್ತು ಬೆಳವಣಿಗೆಗೆ ಕಾರಣರಾಗಬೇಕು. ಯಾವುದೇ ಜಾತಿ ಧರ್ಮ ಮತ ಪಂಥಗಳಿದ್ದರೂ ನಾವು ಕನ್ನಡಿಗರು ಎಂಬ ಹೆಮ್ಮೆ ನಮ್ಮ ಎದೆಯೊಳಗೆ ಇರಬೇಕು ಎಂದು ಹೇಳಿದರು.
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ ಪ್ರಾಸ್ತಾವಿಕ ನುಡಿಗಳಲ್ಲಿ, ಕನ್ನಡ ಉಳಿಸಿ ಬೆಳೆಸುವ ಪ್ರಾಮುಖ್ಯತೆ ಇದೆ ಎಂದರು.
ಪೊನ್ನAಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತ್ ಕೋಶಾಧಿಕಾರಿ ಚಂದನ್ ಕಾಮತ್ ದತ್ತಿನಿಧಿ ಸ್ಥಾಪನೆಗೆ ಕಾರಣವಾದ ವಿಚಾರಗಳನ್ನು ತಿಳಿಸಿದರು. ದತ್ತಿ ದಾನಿಗಳಾದ ಬೆಂಗಳೂರಿನ ಆರ್. ನಾಗೇಂದ್ರ ಕಾಮತ್, ಆರ್. ರಾಜಾರಾವ್, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಟಿ.ಬಿ. ಜೀವನ್, ಟಿ.ಕೆ. ವಾಮನ, ಚಂದನ ಡಿ. ಮಂಜುನಾಥ್ ಇವರುಗಳ ಸಮ್ಮುಖದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶನಿವಾರ ಸಂತೆಯ ಶ್ರೀ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ಅಕ್ಷತಾ ಪರವಾಗಿ ಆಕೆಯ ತಂದೆ ಲೋಕೇಶ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.