ಸಿದ್ದಾಪುರ, ಡಿ. ೧೫: ಕಾಡುಪ್ರಾಣಿಗಳ ಹಾವಳಿ, ಮಾದಕ ವಸ್ತುಗಳ ಮಾರಾಟ, ಬಳಕೆ, ಕುಡಿಯುವ ನೀರು, ರಸ್ತೆ, ಆಟದ ಮೈದಾನ, ಸ್ಮಶಾನ ಜಾಗ, ಸಾರಿಗೆ ಬಸ್ ಸಂಚಾರ, ತ್ಯಾಜ್ಯ ವಿಲೇವಾರಿ, ಅಕ್ರಮ ಸೈಟುಗಳ ಬಗ್ಗೆ ಮಾಲ್ದಾರೆ ಗ್ರಾಮ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಮಾಲ್ದಾರೆ ಪಂಚಾಯಿತಿ ಕಟ್ಟಡದ ಮುಂಭಾಗದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಅವರ ಅಧ್ಯಕ್ಷತೆ ಹಾಗೂ ನೋಡಲ್ ಅಧಿಕಾರಿ ನವೀನ್ ಕುಮಾರ್ ಅವರ ಸಮ್ಮುಖದಲ್ಲಿ ಗ್ರಾಮ ಸಭೆ ನಡೆಯಿತು.

ಸಭೆ ಪ್ರಾರಂಭವಾಗುತ್ತಿದ್ದAತೆ ಸುತ್ತಮುತ್ತಲ ಗ್ರಾಮಗಳಿಂದ ಬಂದ ನೂರಾರು ಮಂದಿ ಕೆಲ ಅಧಿಕಾರಿಗಳ ಗೈರು ಹಾಜರಾತಿ ಬಗ್ಗೆ ಗಮನ ಸೆಳೆದರು. ಆಹಾರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬರುವವರೆಗೂ ಗ್ರಾಮ ಸಭೆ ಮುಂದೂಡಬೇಕೆAದು ಪಟ್ಟು ಹಿಡಿದರು. ಪಂಚಾಯಿತಿಯ ಅಧ್ಯಕ್ಷರು ತಕ್ಷಣ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಸಭೆಗೆ ಬಾರದ ಅಧಿಕಾರಿಗಳನ್ನು ಕಳಿಸುವಂತೆ ಮನವಿ ಮಾಡಿದರು.

ತಕ್ಷಣ ಸ್ಪಂದಿಸಿದ ತಹಶೀಲ್ದಾರರು ಆಹಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಭೆಗೆ ತೆರಳುವಂತೆ ಸೂಚಿಸಿದರು.

ಗ್ರಾಮದಲ್ಲಿ ಹಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಶಾಶ್ವತ ಬದಲಿ ವ್ಯವಸ್ಥೆ ಮಾಡಬೇಕು, ಶುಚಿತ್ವ ಕಾಪಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು. ಸಿದ್ದಾಪುರ ಮಾಲ್ದಾರೆ ಮುಖ್ಯ ರಸ್ತೆ ಬದಿಯ ಅರಣ್ಯದಂಚಿನಲ್ಲಿ ತ್ಯಾಜ್ಯಗಳನ್ನು ಸುರಿಯ ಲಾಗುತ್ತಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಕಾರ್ಮಿಕರು ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು ಕೂಡಲೇ ಪೈಸಾರಿ ಜಾಗ ಗುರುತಿಸಿ ನಿವೇಶನ ನೀಡಬೇಕು. ಸಮೀಪದ ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಅಕ್ಕಿ, ಗೋಧಿ, ರಾಗಿ, ಸೀಮೆ ಎಣ್ಣೆ ಸಿಗುತ್ತಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ಕಿ ಮಾತ್ರ ಸಿಗುತ್ತಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಕತ್ತಲಿನಲ್ಲಿ ದಿನ ಕಳೆಯಬೇಕಾಗಿದೆ ಕೂಡಲೇ ಎಲ್ಲ ಪಡಿತರದೊಂದಿಗೆ ಸೀಮೆಎಣ್ಣೆ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸ್ಮಶಾನ ಜಾಗ ಗುರುತಿಸಿ ಆರ್‌ಟಿಸಿ ನೀಡಲಾಗಿದ್ದರೂ ಇಂದಿಗೂ ಅಧಿಕಾರಿಗಳು ಜಾಗ ಗುರುತಿಸಿಕೊಟ್ಟಿಲ್ಲ. ಕಾಟಾಚಾರಕ್ಕೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರಳುತ್ತಿದ್ದಾರೆ ಹೊರತು ಸಮಸ್ಯೆ ಬಗೆಹರಿಸಿಲ್ಲ. ಗ್ರಾಮದಲ್ಲಿ ಆಟದ ಮೈದಾನದ ವ್ಯವಸ್ಥೆ ಇಲ್ಲದೆ ಕ್ರೀಡಾಪಟುಗಳು, ಶಾಲಾ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಾಲೆ ಮುಂಭಾಗದ ರಸ್ತೆ ಬದಿಯ ಮೈದಾನದಲ್ಲಿ ಮರಗಳು ಬೆಳೆದು ನಿಂತಿದ್ದು ಅರಣ್ಯ ಇಲಾಖೆ ತೆರವುಗೊಳಿಸಬೇಕು.

ಮಾಲ್ದಾರೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾಡುಪ್ರಾಣಿಗಳ ಭಯದ ನಡುವೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪಿರಿಯಾಪಟ್ಟಣ ಮಾಲ್ದಾರೆ, ಸಿದ್ದಾಪುರ ಮಾರ್ಗಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸ್ಥಳೀಯರು ಕತ್ತಲ ಜೀವನ ನಡೆಸುತ್ತಿದ್ದು, ಚೆಸ್ಕಾಂ ಮೇಲಧಿಕಾರಿಗಳು ಪರಿಶೀಲಿಸಿ ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಸಭೆಯಲ್ಲಿ ಒತ್ತಾಯ ಕೇಳಿಬಂತು.

ಮಾಲ್ದಾರೆಯಲ್ಲಿ ನೂತನವಾಗಿ ಪಶುವೈದ್ಯ ಆಸ್ಪತ್ರೆ ಪ್ರಾರಂಭಿಸಲಾಗಿದ್ದರೂ ವೈದ್ಯರು, ಸಿಬ್ಬಂದಿಗಳಿಲ್ಲದೆ ಅನಾಥವಾಗಿದೆ. ಸಿಬ್ಬಂದಿಗಳ ನೇಮಕ ಮಾಡುವುದರೊಂದಿಗೆ ಸೇವೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಶಾಲೆ ಸಮೀಪವಿರುವ ಮದ್ಯದಂಗಡಿಯಿAದ ಮದ್ಯದ ಬಾಟಲಿ ಹಾಗೂ ತ್ಯಾಜ್ಯಗಳು ತಂದು ಶಾಲೆಯ ಮುಂಭಾಗ ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದ್ದು ಶಾಲಾ ವಿದ್ಯಾರ್ಥಿಗಳು ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಕ್ರಮಕೈಗೊಳ್ಳುವಂತೆ ಶಿಕ್ಷಕರು ಒತ್ತಾಯಿಸಿದರು.

ಬಹುತೇಕ ಅರಣ್ಯದಂಚಿನ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳಿದ್ದರೂ ಬೀದಿ ದೀಪಗಳಿಲ್ಲದೆ ಕಾಡಂಚಿನ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬೀದಿ ದೀಪ ಅಳವಡಿಕೆ ಕಾರ್ಯಕ್ಕೆ ಪಂಚಾಯಿತಿ ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದರು. ಪಂಚಾಯಿತಿ ಅಧ್ಯಕ್ಷೆ ಮಾಲತಿ ಮಾತನಾಡಿ, ವಿವಿಧ ಯೋಜನೆಗಳ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗ್ರಾಮದ ಸಮಸ್ಯೆಗಳನ್ನು ಸದ್ಯದಲ್ಲೇ ಬಗೆಹರಿಸಲಾಗುವುದು. ಗ್ರಾಮಸ್ಥರು ಕಂದಾಯ ಪಾವತಿಯೊಂದಿಗೆ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕೆಂದರು. ಈ ಸಂದರ್ಭ ಆಹಾರ, ಪೊಲೀಸ್, ಅರಣ್ಯ, ಪಶು, ಕೃಷಿ, ಶಿಕ್ಷಣ, ಚೆಸ್ಕಾಂ, ಕಂದಾಯ, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಇಲಾಖೆಗಳಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಉಪಾಧ್ಯಕ್ಷ ಕುಂಞಣ್ಣ, ಸದಸ್ಯರುಗಳಾದ, ಸಮೀರ್, ನಿಯಾಜ್, ಮೊಹಮ್ಮದ್ ಅಲಿ, ಹನೀಫ, ಚಂದ್ರ, ಜಯ, ಸುಜಾತಾ, ಕಾವ್ಯ, ಸರಶ್ವತಿ, ಇಸ್ಮಾಯಿಲ್, ಶೋಭ, ಮುತ್ತಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.