ಮಡಿಕೇರಿ, ಡಿ. ೧೫: ನಗರದ ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟು ಬಳಿ ಈಗಾಗಲೇ ನೆಹರೂ ಮಂಟಪ, ಕೂರ್ಗ್ ವಿಲೇಜ್ ತಾಣಗಳನ್ನು ತೆರೆಯಲಾಗಿದೆಯಾದರೂ ಇದೀಗ ಮತ್ತೊಂದು ಆಕರ್ಷಣೆಯಾಗಿರುವ ಸಾಹಸಮಯ ರಸ್ತೆ ಮಾರ್ಗವೊಂದನ್ನು ನಗರಸಭೆ ವತಿಯಿಂದ ತೆರೆಯಲಾಗಿದೆ. ವಾಹನ ಸವಾರರು, ಅದರಲ್ಲಿಯೂ ಬೈಕ್ ಚಾಲಕರಲ್ಲಿ ಸಾಹಸ ಮನೋಭಾವ ಇದ್ದರೆ ಮಾತ್ರ ನಗರಸಭೆಯ ಈ ದುಸ್ಥಿತಿಯ ರಸ್ತೆಯನ್ನು ಜಯಿಸಲು ಸಾಧ್ಯ ಎಂಬAತಿದೆ.!?

ಕAಚಿ ಕಾಮಾಕ್ಷಿ ದೇವಾಲಯ ದಿಂದ ರಾಜಾಸೀಟು ರಸ್ತೆಗೆ ಸಂಪರ್ಕ ಹೊಂದುವ ರಸ್ತೆಯ ಕೊನೆಯಿಂದ ರಾಜಾಸೀಟಿನೆಡೆಗೆ ತೆರಳುವ ರಸ್ತೆಯ ಅಲ್ಪ ಭಾಗವನ್ನು ದಸರಾಗೂ ಮುನ್ನವೇ ಸರಿಪಡಿಸಬೇಕಿತ್ತಾದರೂ ಅವೈಜ್ಞಾನಿಕ ಡಾಂಬರೀಕರಣವಾಗಿದ್ದ ಕಾರಣ ಡಾಂಬರು ಕಿತ್ತು ಬರಲಾರಂಭಿಸಿತು. ಕಳಪೆ ಕಾಮಗಾರಿಯ ಕುರಿತು ಪತ್ರಿಕಾ ವರದಿಗಳು ಹಾಗೂ ಸಾರ್ವಜನಿಕರ ಆಕ್ಷೇಪಣೆಗಳ ಹಿನ್ನೆಲೆ ಗುತ್ತಿಗೆದಾರರು ರಸ್ತೆಯನ್ನು ಸರಿಪಡಿಸುವ ನೆಪದಲ್ಲಿ ಹಾಕಿದ್ದ ಡಾಂಬರನ್ನು ತೆಗೆದು ಹೋದವರು ಇದುವರೆಗೂ ದುರಸ್ತಿ ಕಾಮಗಾರಿ ಪ್ರಾರಂಭಿಸಿಲ್ಲ. ಈ ಮಾರ್ಗವು ಮಡಿಕೇರಿಯಲ್ಲಿ ಪ್ರವಾಸಿಗರು ಅತಿ ಹೆಚ್ಚು ಬಳಸುವ ರಸ್ತೆಯಾಗಿದ್ದು, ಸಂತ ಮೈಕಲರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕೂಡ ಪ್ರತಿನಿತ್ಯ ಬಳಸುವ ರಸ್ತೆ ಇದಾಗಿದೆ. ಪ್ರತಿನಿತ್ಯ ಬಹುತೇಕ ಬೈಕ್ ಸವಾರರು ಹರಸಾಹಸ ಪಟ್ಟು, ಬಹಳಷ್ಟು ಜನ ಬಿದ್ದು, ಎದ್ದು, ಇನ್ನು ಕೆಲವಷ್ಟು ಮಂದಿ ಎಡವಿ ಸಂಕಷ್ಟಕ್ಕೀಡಾದ ನಂತರ ನೇರವಾಗಿ `ಶಕ್ತಿ' ಕಚೇರಿಗೆ ಆಗಮಿಸಿ ತಮ್ಮ ಪಡಿಪಾಟಿಲು ವಿವರಿಸುತ್ತಿದ್ದಾರೆ. ಇನ್ನು ೪, ೫ ತಿಂಗಳುಗಳಲ್ಲಿ ಮಳೆಗಾಲ ಪ್ರಾರಂಭವಾಗುವ ಮೊದಲು, ‘ಮಳೆ ಇದೆ, ಕಾಮಗಾರಿ ನಡೆಸಲು ಸಾಧ್ಯವಿಲ್ಲ' ಎಂಬ ಸುಲಭ ನೆಪ ದೊರಕುವ ಮೊದಲು ನಗರಸಭೆ ಕಾರ್ಯಪ್ರವೃತ್ತರಾಗಿ ರಸ್ತೆ ದುರಸ್ತಿ ಕೈಗೊಳ್ಳುವಂತೆ ಪತ್ರಿಕೆಯ ಮೂಲಕ ಸಾರ್ವಜನಿಕರು ಕೇಳಿಕೊಂಡಿದ್ದಾರೆ.