ಗೋಣಿಕೊಪ್ಪಲು, ಡಿ. ೧೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳೆಯರ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಡಾ. ಡಿ. ವೀರೆಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ವಿ. ಹೆಗ್ಗಡೆಯವರು ನೀಡುತ್ತಾ ಬಂದಿದ್ದಾರೆ. ಇದನ್ನು ನ್ಯಾಯ ಯುತವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಕರೆ ನೀಡಿದರು.

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮ ಸಭಾಂಗಣದಲ್ಲಿ ತಾಲೂಕಿನ ಮಹಿಳಾ ಜ್ಞಾನವಿಕಾಸ ಕೇಂದ್ರಗಳು ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆಯುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇವರು, ಸಂಘದ ಮಹಿಳಾ ಸದಸ್ಯರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಗೊಳಿಸಲಾಗಿದೆ. ಇದರಿಂದ ಸಾಕಷ್ಟು ಮಹಿಳೆಯರು ಸ್ವ ಉದ್ಯೋಗಗಳನ್ನು ಕೈಗೊಂಡಿದ್ದಾರೆ. ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ. ಎಲ್ಲ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಗಾಗಿ ಹಲವು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಂಘದ ವತಿಯಿಂದ ಸಿಗುವ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಬಳಸಿ ಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿಗಳಾದ ಶ್ರೀಮದ್‌ಸ್ವಾಮಿ ಧರ್ಮನಾಥನಂದಾ; ಸನಾತನ ಧರ್ಮದಲ್ಲಿ ಋಷಿವರ್ಯರು ಹಲವು ಮೌಲ್ಯಗಳನ್ನು ನೀಡಿದ್ದರು. ಅದನ್ನು ಇಂದಿಗೆ ಹಲವು ಸಂಸ್ಥೆಗಳು ಪಾಲಿಸುವ ಮೂಲಕ ಜನತೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅಧ್ಯಾತ್ಮಿಕ ಮೌಲ್ಯಗಳನ್ನು, ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ನಮ್ಮ ಹಿರಿಯರನ್ನು ಗೌರವಿಸುವುದು ಇತ್ತೀಚಿನ ದಿನಗಳಲ್ಲಿ ಕಡಿಮೆ ಯಾಗುತ್ತಿದೆ. ವಿವಾಹದ ನಂತರ ಪತಿ ಪತ್ನಿ ಮಾತ್ರ ಜೀವನ ಸಾಗಿಸಲು ಆಲೋಚನೆ ಮಾಡುತ್ತಿದ್ದಾರೆ. ಇದರಿಂದ ಕೂಡು ಕುಟುಂಬಗಳ ಕಲ್ಪನೆ ಮರೆಯಾಗುತ್ತಿದೆ. ಮೊಬೈಲ್‌ನಲ್ಲಿ ತಮ್ಮ ಮಕ್ಕಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲು ಮಹಿಳೆಯರೇ ಪ್ರೋತ್ಸಾಹ ನೀಡುತ್ತಿರುವುದು ಸರಿಯಲ್ಲ. ಇದರಿಂದ ಮುಂದೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೊನ್ನಂಪೇಟೆ ಸಿಐಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತ ಈ ಹಿಂದೆ ಕೆಲವೇ ಕೆಲವು ವರ್ಗದ ಮಹಿಳೆಗೆ ಮಾತ್ರ ಶಿಕ್ಷಣ ಲಭಿಸುತ್ತಿತ್ತು. ಇದೀಗ ಸರ್ವ ಮಹಿಳೆಗೂ ಶಿಕ್ಷಣ ಲಭಿಸುತ್ತಿದೆ.

ಮನೆಯ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಮಹಿಳೆ ತನ್ನ ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಉಳ್ಳವರನ್ನಾಗಿ ಮಾಡಬೇಕು. ಎಲ್ಲರನ್ನು ಸಮಾನವಾಗಿ ಕಾಣು ವಂತಾಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಮಹಿಳೆ ನೀಡುವ ಕೊಡುಗೆಯಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅರುವತೋಕ್ಲು ಸರ್ವದೇವತಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಶೀಲಾ ಬೋಪಣ್ಣ ಮಾತನಾಡಿ, ಇಂದಿಗೂ ಮಹಿಳೆ ಅಬಲೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಇದು ಸರಿಯಲ್ಲ. ಪುರುಷರು ನಮ್ಮನ್ನು ಎಂದಿಗೂ ಅಬಲೆಯನ್ನಾಗಿ ಮಾಡಿಲ್ಲ. ಮಹಿಳೆಯರೇ ತಾವಾಗಿಯೇ ಅಬಲೆ ಎಂಬ ಮನೋಭಾವದಿಂದ ಹೊರಬರಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ದಯಾಸಾಗರನಂದಾಜೀ ಉಪಸ್ಥಿತರಿದ್ದರು. ಸೇವಾಪ್ರತಿನಿಧಿಗಳು ಪ್ರಾರ್ಥಿಸಿ ಯೋಜನಾ ಅಧಿಕಾರಿ ಗಳಾದ ಬಿ. ದಿನೇಶ್ ಸ್ವಾಗತಿಸಿ ಪೊನ್ನಂಪೇಟೆ ಮೇಲ್ವಿಚಾರಕ ನರಸಿಂಹಮೂರ್ತಿ ನಿರೂಪಿಸಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೇಯ ವಂದಿಸಿದರು. ಪೊನ್ನಂಪೇಟೆ ವಲಯದ ಸೇವಾ ಪ್ರತಿನಿಧಿಗಳಾದ ರೋಹಿಣಿ, ಗೌರಿ, ಶಾಲಿನಿ, ಮೋಶಿನ, ಚೋಂದು, ಗೀತಾ ಮತ್ತು ತಾಲೂಕಿನ ಜ್ಞಾನವಿಕಾಸ ಕೇಂದ್ರದ ಸೇವಾ ಪ್ರತಿನಿಧಿಗಳು ವಲಯದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಜ್ಞಾನವಿಕಾಸದ ತಂಡಗಳು ನೃತ್ಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.

ವಿವಿಧ ಫಲಾನುಭವಿಗಳಿಗೆ ವ್ಹೀಲ್‌ಚೇರ್ ಹಾಗೂ ಹೊಲಿಗೆ ಯಂತ್ರದ ತರಬೇತಿಯ ಪ್ರಮಾಣ ಪತ್ರಗಳನ್ನು ನೀಡಲಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಮಹಿಳೆಯರು ತಾವೇ ತಯಾರಿಸಿದ ಹಲವು ಉತ್ಪನ್ನಗಳನ್ನು ಮಾರಾಟ ಮಾಡಿದರು.