ಕೃಷ್ಣ ಜನ್ಮಸ್ಥಳದ ಸರ್ವೆಗೆ ಮಥುರಾ ಹೈಕೋರ್ಟ್ ಆದೇಶ
ಮಥುರಾ, ಡಿ. ೧೪: ಮಹತ್ವದ ಬೆಳವಣಿಗೆಯಲ್ಲಿ ಜ್ಞಾನವಾಪಿ ಮಾದರಿಯಂತೆ ಕೃಷ್ಣ ಜನ್ಮಸ್ಥಳದ ಸರ್ವೆಗೆ ಮಥುರಾ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಜ. ೨೦ ರಂದು ಸರ್ವೆ ವರದಿ ಸಲ್ಲಿಸಲು ಮಥುರಾ ಕೋರ್ಟ್ ಆದೇಶಿಸಿದೆ. ಮಥುರಾದಲ್ಲಿರುವ ಕೃಷ್ಣ ದೇಗುಲ ಸಮೀಕ್ಷೆಗೆ ಮಥುರಾ ಹೈಕೋರ್ಟ್ ಆದೇಶ ನೀಡಿದ್ದು, ಜ.೨೦ರಂದು ಸರ್ವೆ ವರದಿ ಸಲ್ಲಿಸಲು ಸೂಚಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ಮಾಡಲು ಆದೇಶ ನೀಡಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಸರ್ಕಾರ ಈಗಾಗಲೇ ಈ ಬಗ್ಗೆ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದೆ. ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಿಸಿ ಮಸೀದಿ ನಿರ್ಮಿಸಲಾಗಿದ್ದು, ಶಾಹಿ ಈದ್ಗಾ ಮಸೀದಿಯಲ್ಲಿ ಶುದ್ಧೀಕರಣ ವಿಧಿಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿಯೇ ಶಾಹಿ ಈದ್ಗಾ ಮಸೀದಿಯೂ ಇದೆ. ಶಾಹಿ ಈದ್ಗಾ ಮಸೀದಿ ಇರುವ ಸ್ಥಳದಲ್ಲಿಯೇ ಶ್ರೀಕೃಷ್ಣನ ಪುರಾತನ ದೇಗುಲವೂ ಇತ್ತು. ಶ್ರೀಕೃಷ್ಣನ ಜನ್ಮಭೂಮಿಯ ಗರ್ಭಗೃಹದ ಮೇಲೆಯೇ ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಗೆ ಪ್ರವೇಶಿಸಿ ಅಭಿಷೇಕ ನಡೆಸಲು ಅವಕಾಶ ನೀಡಬೇಕು ಎಂದು ಹಿಂದೂ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ವಿನಂತಿಸಿದ್ದರು.
ಐದನೇ ಗ್ಯಾರಂಟಿ ‘ಯುವ ನಿಧಿ' ಯೋಜನೆ ಜನವರಿ ೧ ರಿಂದ ಜಾರಿ
ಬೆಂಗಳೂರು, ಡಿ. ೧೪: ಪದವೀಧರರಿಗೆ ೩ ಸಾವಿರ ರೂಪಾಯಿ ಮತ್ತು ಡಿಪ್ಲೊಮಾ ಮಾಡಿದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ೧೫೦೦ ಭತ್ಯೆ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ‘ಯುವ ನಿಧಿ' ಯೋಜನೆ ಹೊಸ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಘೋಷಿಸಿದ್ದಾರೆ. ಈ ಮುಂಚೆ ಡಿಸೆಂಬರ್ ೨೬ ರಿಂದ ‘ಯುವ ನಿಧಿ' ನೋಂದಣಿ ಪ್ರಾರಂಭ ವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಯೋಜನೆಯು ಜನವರಿ ೧, ೨೦೨೪ ರಿಂದ ಜಾರಿಗೆ ಬರಲಿದೆ ಮತ್ತು ಅರ್ಜಿದಾರರು ‘ಸೇವಾ ಸಿಂಧು' ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳ ಬಹುದು ಎಂದು ತಿಳಿಸಿದ್ದಾರೆ. ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಲು ಅರ್ಹರು ಎಂದು ಮುಖ್ಯಮಂತ್ರಿಗಳು ಸಾಮಾಜಿಕ ಮಾಧ್ಯಮ ‘ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ರೂ. ೩,೦೦೦ ಮತ್ತು ಡಿಪ್ಲೊಮಾ ಮಾಡಿದ ನಿರುದ್ಯೋಗಿಗಳಿಗೆ ರೂ. ೧,೫೦೦ ನೀಡಲಾಗುತ್ತದೆ. ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ವರ್ಷದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು ಮತ್ತು ಅದರಲ್ಲಿ ‘ಯುವ ನಿಧಿ' ಕೂಡ ಒಂದಾಗಿದೆ.
ದಲಿತರ ಶ್ರೇಯೋಭಿವೃದ್ಧಿಗೆ ಎಸ್ಸಿಪಿ-ಟಿಎಸ್ಪಿ: ಕಾಯ್ದೆ ಜಾರಿಯಾಗಲಿ
ಬೆಳಗಾವಿ, ಡಿ. ೧೪: ಬಿಜೆಪಿ ದಲಿತ ಮತ್ತು ಶೋಷಿತ ವಿರೋಧಿ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರು ಹಾಗೂ ಬುಡುಕಟ್ಟು ಸಮುದಾಯದ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳನ್ನು (ಎಸ್ಸಿಪಿ-ಟಿಎಸ್ಪಿ) ಕಾಯ್ದೆಯಾಗಿ ಜಾರಿಗೆ ತರಲಿ ಎಂದು ಬಿಜೆಪಿ ಮುಖಂಡರು ಹಾಗೂ ಅವರ ಚುನಾಯಿತ ಪ್ರತಿನಿಧಿಗಳಿಗೆ ಸವಾಲು ಹಾಕಿದರು. ವಿಧಾನ ಪರಿಷತ್ತಿನಲ್ಲಿ ಗುರುವಾರ ಪೂರಕ ಅಂದಾಜು ಮಂಡನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾಯ್ದೆಯನ್ನು ಜಾರಿಗೆ ತರುವಂತೆ ಬಿಜೆಪಿ ನಾಯಕರನ್ನು ಕೇಳಿದರು. ಬಿಜೆಪಿ ಎಂಎಲ್ಸಿಗಳು ಮತ್ತು ಸಂಸದರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ, ದೇಶದಲ್ಲಿ ಇದೇ ರೀತಿಯ ಕಾಯ್ದೆಯನ್ನು ಜಾರಿಗೆ ತರುವಂತೆ ಸವಾಲು ಹಾಕುತ್ತೇನೆ ಎಂದರು. ಕಾಯ್ದೆ ಕುರಿತು ವಿವರಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿನ ಎಸ್ಸಿ-ಎಸ್ಟಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮೀಸಲಿಡಲು ಕಾಂಗ್ರೆಸ್ ಸರ್ಕಾರ ೨೦೧೩ರಲ್ಲಿ ಕಾಯ್ದೆ ತಂದಿತ್ತು. ಅಲ್ಲಿಯವರೆಗೆ ಸರಕಾರ ಎಸ್ಸಿ ಮತ್ತು ಎಸ್ಟಿಗಳ ಕಲ್ಯಾಣಕ್ಕಾಗಿ ಸುಮಾರು ರೂ. ೬,೦೦೦ ರಿಂದ ೭,೦೦೦ ಕೋಟಿ ಅನುದಾನ ಮಾತ್ರ ನೀಡಲಾಗುತಿತ್ತು. ಆದರೆ ಕಾಯ್ದೆ ಜಾರಿ ನಂತರ ಆಂಧ್ರಪ್ರದೇಶದ ನಂತರ ದೇಶದಲ್ಲಿಯೇ ಕರ್ನಾಟಕ ಎರಡನೇ ರಾಜ್ಯ ಎನಿಸಿಕೊಂಡಿತು. ಗ್ಯಾರಂಟಿ ಯೋಜನೆಗಳಾಗಿ ರೂ. ೧೧,೦೦೦ ಕೋಟಿ ಎಸ್ಸಿಪಿ-ಟಿಎಸ್ಪಿ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂಎಲ್ಸಿಗಳಾದ ರವಿಕುಮಾರ್ ಮತ್ತು ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು. ಕೋಟಾ ಶ್ರೀನಿವಾಸ್ ಪೂಜಾರ್ ಮತ್ತು ವೈ.ಎ. ನಾರಾಯಣಸ್ವಾಮಿ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು.
ಅರಣ್ಯ ಭೂಮಿ ಗಡಿ ಗುರುತಿಸಲು ಜಂಟಿ ಸರ್ವೆ: ಸಚಿವ ಈಶ್ವರ್ ಖಂಡ್ರೆ
ಬೆಳಗಾವಿ, ಡಿ. ೧೪: ಅರಣ್ಯ ಭೂಮಿ ಗಡಿ ಗುರುತಿಸಿ ನಿಖರ ನಕ್ಷೆ ಮಾಡುವ ಸಲುವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ವಿಧಾನಸಭೆಯಲ್ಲಿಂದು ಹೇಳಿದರು. ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕ ಅರಣ್ಯ ನಿಯಮದ ಪ್ರಕಾರ ಜಿಲ್ಲಾ ಅರಣ್ಯ ಅಥವಾ ರಕ್ಷಿತ ಅರಣ್ಯಕ್ಕೆ ಹೊಂದಿಕೊAಡತೆ ಹಾಗೂ ೧೦೦ ಮೀಟರ್ ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾತಿ ಪೂರ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮತಿ ಪಡೆಯುವುದು ಕಡ್ಡಾಯವಾಗಿದೆ. ಅಧಿಸೂಚಿತ ಹಾಗೂ ಡೀಮ್ಡ್ ಅರಣ್ಯ ಅರಣ್ಯ ಪ್ರದೇಶಗಳಿಗೆ ಸರ್ವೆ ನಂಬರ್ ಅನ್ವಯ ವಿವರವಾದ ಮಾಹಿತಿ ಇಲ್ಲದಂತಹ ಸಂದರ್ಭದಲ್ಲಿ ನಿರಾಕ್ಷೇಪಣ ಪತ್ರ ನೀಡಲು ಕಂದಾಯ ಇಲಾಖೆಯೊಂದಿಗೆ ಜಂಟಿ ಮೋಜಣಿ ಮಾಡಲಾಗುವುದು ಎಂದರು.