ಕೂಡಿಗೆ, ಡಿ. ೧೩: ಕವನ ಓದುವ ಜೊತೆಗೆ ಸಂಕಟವನ್ನು ಕವನ ವಾಚಿಸುವ ಕವಿಗಳು ಅರಿಯಬೇಕು ಎಂದು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಬ್ಬಾಲೆ ಬನಶಂಕರಿ ಹಬ್ಬದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಘಟಕದ ವತಿಯಿಂದ ಬನಶಂಕರಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಈಗಲೇ ಕವಿಗೋಷ್ಠಿಗಳಿಗೆ ಸಾರ್ವಜನಿಕರು ಬರುವುದು ಕಡಿಮೆ. ಅಂತಹುದರಲ್ಲಿ ಕವಿಗಳು ತಮಗೆ ಇಷ್ಟ ಬಂದ ಹಾಗೆ ಬರೆದು ಜನರಲ್ಲಿ ಸಾಹಿತ್ಯ ಆಸಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಬಾರದು ಎಂದರು.

ಮುಖ್ಯ ಅತಿಥಿಗಳಾಗಿದ್ದ ಸೋಮವಾರಪೇಟೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಕವಿಗೋಷ್ಠಿ ನಡೆಸುವ ಮೂಲಕ ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸಲಾಗುತ್ತಿದೆ. ಕೊಡಗಿನಲ್ಲಿ ಮಹಿಳಾ ಬರಹಗಾರ ಸಂಖ್ಯೆ ತುಂಬಾ ಕಡಿಮೆಯಿತ್ತು ಎನ್ನುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರೇ ಹೆಚ್ಚು ಇರುವುದು ಸಂತಸ ತಂದಿದೆ.

ಕೊಡಗು ನಿಸರ್ಗಕ್ಕೆ, ವೀರರ ನಾಡು, ಕಾವೇರಿ ನದಿ, ಸೈನಿಕರ ತವರೂರು. ಆದರೇ ಬರಹಗಾರರು ಕೂಡ ಕೇವಲ ಇದೇ ವಿಚಾರಗಳಿಗೆ ಸೀಮಿತಗೊಳ್ಳದೇ, ಹೆಚ್ಚು ಓದುವ ಮೂಲಕ ಹೊರಜಗತ್ತಿಗೆ ತೆರೆದು ಕೊಳ್ಳಬೇಕು ಎಂದು ಕರೆ ನೀಡಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಕವಿಗಳು, ಸಾಹಿತಿಗಳು ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆ ನಡೆಸುವ ಮೂಲಕ ಯುವ ಜನಾಂಗದಲ್ಲೂ ಸಾಹಿತ್ಯ ಆಸಕ್ತಿಯನ್ನು ಬೆಳೆಸಬೇಕೆಂದು ಕರೆ ನೀಡಿದರು.

ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ೨೦ಕ್ಕೂ ಹೆಚ್ಚು ಕವಿಗಳು ಆಗಮಿಸಿ ತಮ್ಮ ಸ್ವರಚಿತಾ ಕವನಗಳನ್ನು ವಾಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಬ್ಬಾಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್ಚಿನ ವಿ. ಶಿವಪ್ಪ, ಜಿಲ್ಲಾ ಸಮಿತಿಯ ಫ್ಯಾನ್ಸಿ ಮುತ್ತಣ್ಣ, ಹೆಬ್ಬಾಲೆ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜಪ್ಪ, ಕುಶಾಲನಗರ ತಾಲೂಕು ಕಸಾಪ ಕಾರ್ಯದರ್ಶಿ ಎಸ್. ನಾಗರಾಜ್, ಹೆಬ್ಬಾಲೆ ಘಟಕದ ಕಾರ್ಯದರ್ಶಿ ಕವಿತಾ, ಸದಸ್ಯರಾದ ಎಂ.ಎನ್. ಕಾಳಪ್ಪ, ಡಿ.ಎಸ್. ಸೋಮಶೇಖರ್, ಮಾಜಿ ಸೈನಿಕ ಪುಟ್ಟೇಗೌಡ, ಜಯಮ್ಮ ಮತ್ತಿತರರು ಹಾಜರಿದ್ದರು.