‘ಶಕ್ತಿ’ ವರದಿಗೆ ಶಾಸಕರ ಸ್ಪಂದನ...

ಕಣಿವೆ, ಡಿ. ೧೩: ಕೊಡಗು ವಿವಿ ಅಭಿವೃದ್ಧಿಗೆ ಪೂರಕವಾಗುವಂತೆ ೨ ಕೋಟಿ ರೂ.ಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಲಾಗಿದೆ ಎಂದು ಮಡಿಕೇರಿ ಶಾಸಕ ಡಾ.ಮಂಥರಗೌಡ ಹೇಳಿದರು.

‘ಶಕ್ತಿ’ ಯಲ್ಲಿ ಬುಧವಾರ ‘ಸರ್ಕಾರದ ಅವಕೃಪೆಯಲ್ಲಿ ಕೊಡಗು ವಿಶ್ವವಿದ್ಯಾಲಯ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಲೇಖನಕ್ಕೆ ಸ್ಪಂದಿಸಿ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಮಂಥರ್‌ಗೌಡ, ಕಳೆದ ಕೆಲವೇ ತಿಂಗಳುಗಳ ಹಿಂದಷ್ಟೇ ಆರಂಭವಾದ ಕೊಡಗು ವಿವಿ ಯ ಅಭಿವೃದ್ಧಿ ಸರ್ಕಾರದ ಜವಾಬ್ದಾರಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ಅಗತ್ಯ ಅನುದಾನ ತರಲಾಗುತ್ತದೆ.

ಪ್ರತಿಭಟನೆ ನಡೆಸಿದ್ದ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಸಮಗ್ರ ಶೈಕ್ಷಣಿಕವಾದ ಚಟುವಟಿಕೆಗಳಿಗೆ ಪೂರಕವಾಗುವಂತೆ ಯೋಜನೆಗಳನ್ನು ಹಂತ ಹಂತವಾಗಿ ರೂಪಿಸಲಾಗುತ್ತದೆ. ಕೊಡಗು ವಿವಿ ಅಧೀನದಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಜೊತೆಗೆ ಫ್ಯಾಷನ್ ಡಿಸೈನಿಂಗ್, ವಿವಿಧ ವೃತ್ತಿಪರ ಕೋರ್ಸ್ಗಳು ಸೇರಿದಂತೆ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳಾಗಿಸಲು ಅನುಕೂಲವಾಗುವಂತಹ ಮತ್ತಷ್ಟು ಸಂಸ್ಥೆಗಳನ್ನು ಸರ್ಕಾರ ತೆರೆಯುವ ಚಿಂತನೆ ಹೊಂದಿರುವುದಾಗಿ ಶಾಸಕ ಮಂಥರಗೌಡ ಹೇಳಿದರು.