· ‘ಶಕ್ತಿ’ ವರದಿ ಫಲಶ್ರುತಿ

· ಅಂಗನವಾಡಿ ಕೇಂದ್ರಕ್ಕೆ ಆಹಾರ ಸರಬರಾಜು

ಗೋಣಿಕೊಪ್ಪಲು, ಡಿ. ೧೩: ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ೭೦೦ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕಳೆದ ೨ ತಿಂಗಳ ಮಾಸಿಕ ವೇತನ ಲಭಿಸಿದೆ.

ಪ್ರತಿ ತಿಂಗಳು ಸರ್ಕಾರದ ವತಿಯಿಂದ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಸಿಕವಾಗಿ ಸಿಗುವ ಆಹಾರ ಸಾಮಾಗ್ರಿಗಳು ಕೂಡ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗಿವೆ. ಪೊನ್ನಂಪೇಟೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ನಟರಾಜ್ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ, ಅಂಗನವಾಡಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕುಂದು ಕೊರತೆ ಸಭೆ ನಡೆಸಿ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಪ್ರಗತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ತಾಲೂಕು ಅಧಿಕಾರಿ ನಟರಾಜ್ ಕೆಲವು ತಾಂತ್ರಿಕ ಕಾರಣದಿಂದ ಕಳೆದ ೨ ತಿಂಗಳಿನಿAದ ವೇತನ ಮಂಜೂರು ಮಾಡಲು ತಡವಾಗಿತ್ತು. ಇದೀಗ ತಾಂತ್ರಿಕ ಸಮಸ್ಯೆಯನ್ನು ನೀಗಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಒದಗಿಸಲಾಗಿದೆ. ಯಾವುದೇ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತರುವಂತೆ, ಇಲಾಖೆಯ ಸುತ್ತೋಲೆಯಂತೆ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು.

ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ಮಾಸಿಕ ವೇತನ ವಿಲ್ಲದೆ ಸಂಕಷ್ಟದಲ್ಲಿರುವ ಬಗ್ಗೆ ‘ಶಕ್ತಿ’ಯು ಸಮಗ್ರ ವರದಿ ಪ್ರಕಟಿಸುವ ಮೂಲಕ ಬೆಳಕು ಚೆಲ್ಲಿತ್ತು. ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಇಲಾಖೆಯ ಹಿರಿಯ ಅಧಿಕಾರಿಗಳು ವೇತನ ಮಂಜೂರು ಮಾಡುವುದರೊಂದಿಗೆ ಅಂಗನವಾಡಿ ಕೇಂದ್ರಕ್ಕೆ ಆಹಾರ ಸರಬರಾಜು ಮಾಡಿದ್ದಾರೆ. ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರ, ಸಹಾಯ ಕಿಯರ, ಅಂಗನವಾಡಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕುಂದು ಕೊರತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ. -ಹೆಚ್.ಕೆ. ಜಗದೀಶ್