(ವಿಶೇಷ ವರದಿ: ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಡಿ. ೧೨: ನಡು ರಾತ್ರಿಯ ವೇಳೆ ರಾಜ್ಯ ಹೆದ್ದಾರಿಯಲ್ಲಿ ನಡೆದ ದರೋಡೆ ಪ್ರಕರಣ ಪತ್ತೆಗೆ ಕೊಡಗಿನ ಪೊಲೀಸರು ವಿಶೇಷ ೫ ತಂಡದಲ್ಲಿ ಕೇರಳ, ಮೈಸೂರು, ಹುಣಸೂರು ಸೇರಿದಂತೆ ಇನ್ನಿತರ ಭಾಗದಲ್ಲಿ ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮುಂದಾಳತ್ವ ದಲ್ಲಿ ಕೊಡಗು ಎಸ್ಪಿ ರಾಮರಾಜನ್ ಮಾರ್ಗದರ್ಶನದಲ್ಲಿ ವಿವಿಧ ತಂಡಗಳು ಡಕಾಯಿತಿ ನಡೆಸಿದ ತಂಡವನ್ನು ಪತ್ತೆ ಹಚ್ಚಲು ವಿವಿಧ ಕೋನದಲ್ಲಿ ತನಿಖೆ ಕೈಗೊಂಡಿದ್ದಾರೆ. ಹಗಲು ರಾತ್ರಿ ಎನ್ನದೆ ಪೊಲೀಸರ ತಂಡ ಪ್ರಕರಣವನ್ನು ಭೇದಿಸಲು ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ನಡೆಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಚಿನ್ನವನ್ನು ಮಾರಾಟ ಮಾಡಿ ರೂ. ೫೦ ಲಕ್ಷ ಹಣದೊಂದಿಗೆ ಮೈಸೂರಿ ನಿಂದ ಕೇರಳಕ್ಕೆ ತಡರಾತ್ರಿ ೨.೩೦ರ ಸುಮಾರಿಗೆ ತೆರಳುತ್ತಿದ್ದ ಶಂಜ್ಜಾದ್ ಎಂಬ ವ್ಯಕ್ತಿಯು ತಿತಿಮತಿ ಬಳಿಯ ದೇವರಪುರ ಸಮೀಪ ತನ್ನ ಕಾರಿನಲ್ಲಿ ಬರುತ್ತಿದ್ದ ಹಿಂಬದಿಯಿAದ ಮೂರು ಕಾರುಗಳಲ್ಲಿ ಬಂದ ದರೋಡೆಕೋರರು ಶಂಜ್ಜಾದ್‌ನನ್ನು ಸುತ್ತುವರೆದು ಆತನ ಮೇಲೆ ಹಲ್ಲೆ ನಡೆಸಿ ಆತನ ಕಾರಿನೊಂದಿಗೆ ಗೋಣಿಕೊಪ್ಪ ಸಮೀಪದ ಹಾತೂರು ಬಳಿಗೆ ತೆರಳಿ ಶಂಜ್ಜಾದ್‌ನನ್ನು ರಸ್ತೆಯಲ್ಲಿಯೇ ಇಳಿಸಿ ಆತನ ಕಾರನ್ನು ಸಮೀಪದ ಬೈಗೋಡು ರಸ್ತೆಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಕಾರನ್ನು ಸಂಪೂರ್ಣ ಜಖಂಗೊಳಿಸಿ ಶಂಜ್ಜಾದ್ ಕಾರಿನಲ್ಲಿಟ್ಟಿದ್ದ ಎನ್ನಲಾದ ರೂ. ೫೦ ಲಕ್ಷ ಹಣದೊಂದಿಗೆ ದರೋಡೆ ಕೋರರು ಪರಾರಿಯಾಗಿದ್ದರು.

ಮುಂಜಾನೆ ವೇಳೆ ಹಲ್ಲೆಗೊಳ ಗಾಗಿ ಹಣ ಕಳೆದುಕೊಂಡ ಕೇರಳ ಮೂಲದ ಮಟಪುರಂ ಜಿಲ್ಲೆಯ ಕೆ.ಶಂಜ್ಜಾದ್ ಗೋಣಿಕೊಪ್ಪ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿ ದೂರು ನೀಡಿದ್ದ, ರಾಜ್ಯ ಹೆದ್ದಾರಿಯಲ್ಲಿ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರು ವಿಭಾಗೀಯ ಐಜಿಪಿ ಬೋರಲಿಂಗಯ್ಯ ಹಾಗೂ ಕೊಡಗು ಎಸ್ಪಿ ರಾಮರಾಜನ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಮೂಲಕ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತಂಡಗಳನ್ನು ರಚಿಸಿದ್ದರು.

ದೂರುದಾರ ಶಂಜ್ಜಾದ್ ನೀಡಿದ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು. ಚಿನ್ನವನ್ನು ನೀಡಿ ರೂ. ೫೦ ಲಕ್ಷ ಹಣವನ್ನು ಪಡೆದಿದ್ದ ಮೈಸೂರಿನ ಅಶೋಕ ರಸ್ತೆಯ ಚಿನ್ನದ ವ್ಯಾಪಾರಿಯ ಬಳಿಗೆ ತೆರಳಿ ಶಂಜ್ಜಾದ್ ನೀಡಿದ ಚಿನ್ನದ ಗಟ್ಟಿಯನ್ನು ಖರೀದಿಸಿರುವುದು ನಿಜವೆಂದು ಚಿನ್ನದ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿವಿಧ ಹಂತದಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಅಗತ್ಯ ಇರುವ ಕಡೆಯ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೈಸೂರು ಭಾಗದಿಂದ ತಡ ರಾತ್ರಿಯಲ್ಲಿ ಕೊಡಗಿನ ತಿತಿಮತಿಯ ಆನೆ ಚೌಕೂರು ಗಡಿಯಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿದೆ. ದೂರುದಾರ ಚಾಲನೆ ಮಾಡುತ್ತಿದ್ದ ಕಾರನ್ನು ಹಿಂಬಾಲಿಸಿದ ವಾಹನಗಳ ಜಾಡು ಪತ್ತೆಗೆ ಕ್ರಮವಹಿಸಲಾಗಿದೆ.

ಪೊಲೀಸರಿಗೆ ಸಿಕ್ಕಿರುವ ಸದ್ಯದ ಮಾಹಿತಿ ಪ್ರಕಾರ ರಾಜ್ಯ ಹೆದ್ದಾರಿಯಲ್ಲಿ ದೊಡ್ಡದಾದ ದರೋಡೆಕೋರರ ಜಾಲವು ವ್ಯಾಪಿಸಿದ್ದು ಇದರಲ್ಲಿರುವ ತಂಡವು ದರೋಡೆ ನಡೆಸಿರುವ ಬಗ್ಗೆ ಅಂದಾಜಿಸಲಾಗಿದೆ. ಕಳ್ಳ ಸಾಗಾಣಿಕೆಯ ಮೂಲಕ ಹೊರ ದೇಶದಿಂದ ಬರುವ ಅಕ್ರಮ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡುವ ಸಲುವಾಗಿ ಮೈಸೂರು ಚಿನ್ನದ ವ್ಯಾಪಾರಿಯನ್ನು ಭೇಟಿ ಮಾಡು ತ್ತಿರುವುದು, ಇವರಿಂದ ಯಾವುದೇ ರಶೀದಿ ಇಲ್ಲದೆ ಸರ್ಕಾರಕ್ಕೆ ತೆರಿಗೆ ವಂಚಿಸಿ ಹಣವನ್ನು ಬಟವಾಡೆ ಮಾಡುತ್ತಿರುವುದು ಮೇಲ್ನೋಟಕ್ಕೆ ಈ ತನಿಖೆಯಿಂದ ದೃಢಪಟ್ಟಿದೆ.