ರಾಜಸ್ಥಾನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ

ಜೈಪುರ, ಡಿ. ೧೨: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಹೆಸರು ಘೋಷಣೆ ಮಾಡಲಾಗಿದೆ. ರಾಜ್ಯದ ವೀಕ್ಷಕ ರಾಜನಾಥ್ ಸಿಂಗ್ ಅವರು ನೂತನ ಸಿಎಂ ಹೆಸರು ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಗೆಲುವು ಸಾಧಿಸಿತ್ತು. ಕೆಲವು ದಿನಗಳ ಆಯ್ಕೆ ಕಸರತ್ತಿನ ಬಳಿಕ ಇಂದು ಬಿಜೆಪಿ ವರಿಷ್ಠರು ಭಜನ್ ಲಾಲ್ ಶರ್ಮಾ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ೫೬ ವರ್ಷದ ಭಜನ್ ಲಾಲ್ ಶರ್ಮಾ ಅವರು ಸಂಗನರ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಮೊದಲ ಅವಕಾಶದಲ್ಲಿಯೇ ಅವರು ಸಿಎಂ ಸ್ಥಾನಕ್ಕೇರಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಭೈರ್ವಾ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ.

ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸನ್ನದ್ಧ-ಸಿಎಂ

ಬೆAಗಳೂರು, ಡಿ. ೧೨: ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಎದುರಾಗುವ ಭೀಕರತೆಗೆ ಅನುಗುಣವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ, ಜನವರಿ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದ್ದು, ದಿನದ ೨೪ ಗಂಟೆಯೂ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬರ ನಿರ್ವಹಣೆಗೆ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಲಾಗಿದೆ. ಈಗಾಗಲೇ ೧೮೩ ಟಾಸ್ಕ್ಫೋರ್ಸ್ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿನ ಬರಗಾಲ ನಿರ್ವಹಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಶಾಸಕರಿಗೆ ನೀಡಲಾಗಿದೆ. ಅವರ ಅಧ್ಯಕ್ಷತೆಯಲ್ಲಿಯೇ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರ ಖಾತೆಗಳಿಗೆ ಸುಮಾರು ರೂ. ೯೦೦ ಕೋಟಿ ಎಸ್.ಡಿ.ಆರ್.ಎಫ್. ಮೂಲಕ ನೀಡಲಾಗಿದ್ದು, ಹಣ ಬಳಕೆಯ ಸಂಪೂರ್ಣ ಅಧಿಕಾರವನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಗಳಿಗೆ ನೀಡಲಾಗಿದೆ ಎಂದು ಅವರು ವಿವರ ನೀಡಿದ್ದಾರೆ. ಎಷ್ಟೇ ಹಣ ಖರ್ಚಾದರೂ ನೀರು, ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಜನರಿಗೆ ಉದ್ಯೋಗದ ಕೊರತೆಯೂ ಆಗದಂತೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಯಾವುದೇ ರಾಜ್ಯಗಳ ಜಿಎಸ್‌ಟಿ ಬಾಕಿ ಉಳಿದಿಲ್ಲ-ನಿರ್ಮಲಾ ಸೀತಾರಾಮನ್

ನವದೆಹಲಿ, ಡಿ. ೧೨: ಯಾವುದೇ ರಾಜ್ಯಗಳ ಜಿಎಸ್‌ಟಿ ಬಾಕಿ ಉಳಿದಿಲ್ಲ. ಕೆಲವು ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣ ಬಿಡುಗಡೆಗೆ ಎಜಿಯ ದೃಢೀಕೃತ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ರಾಜ್ಯ ಸಭೆಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರದಿAದ ಜಿಎಸ್‌ಟಿ ಬಾಕಿ ಉಳಿದಿದೆ ಎಂಬ ಹೇಳಿಕೆ ಸರಿಯಲ್ಲ. ರಾಜ್ಯಗಳು ಎಜಿ ವರದಿ ಸಲ್ಲಿಸದೇ ಇರುವುದು ತಪ್ಪು ಎಂದರು. "ಎಜಿಯ (ಅಕೌಂಟೆAಟ್ ಜನರಲ್) ಪ್ರಮಾಣೀಕರಣ ಕಡ್ಡಾಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದನ್ನು ಕೇಂದ್ರ ಸರ್ಕಾರಕ್ಕೆ ಸಲಿಸದಿದ್ದರೆ ಜಿಎಸ್‌ಟಿ ಬಾಕಿ ಬಿಡುಗಡೆ ಸಾಧ್ಯವಿಲ್ಲ. ಕೆಲವು ರಾಜ್ಯಗಳು ಎಜಿ ಪ್ರಮಾಣಪತ್ರ ಕಳುಹಿಸಿದ ನಂತರವೂ, ಅಂತಿಮ ಬಾಕಿ ಬಿಡುಗಡೆಯನ್ನು ಸ್ವಲ್ಪ ತಡೆಯುವಂತೆ ಕೇಳುತ್ತಾರೆ ಎಂದು ತಿಳಿಸಿದರು. ತೃಣಮೂಲ ಕಾಂಗ್ರೆಸ್ ಸದಸ್ಯ ಸಾಕೇತ್ ಗೋಖಲೆ, ರಾಜ್ಯಗಳ, ವಿಶೇಷವಾಗಿ ಪಶ್ಚಿಮ ಬಂಗಾಳಕ್ಕೆ ಜಿಎಸ್‌ಟಿ ಬಾಕಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ನಿರ್ದಿಷ್ಟವಾಗಿ ಕೆಲವು ರಾಜ್ಯಗಳನ್ನು ಹೆಸರಿಸುತ್ತೇನೆ. ಇದರಿಂದ ಜನರ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ೨೦೨೨-೨೩ ಆರ್ಥಿಕ ವರ್ಷದಲ್ಲಿ ಕರ್ನಾಟಕ ಹೊರತುಪಡಿಸಿ ಯಾವುದೇ ರಾಜ್ಯಗಳು ಎಜಿ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಕ್ರಿಮಿನಲ್ ಕಾನೂನು ಮಸೂದೆ ಹಿಂಪಡೆತ

ನವದೆಹಲಿ, ಡಿ. ೧೨: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬ್ರಿಟಿಷ್ ಕಾಲದ ಹಳೆಯ ಮೂರು ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಹಿಂಪಡೆದಿದ್ದು, ಹೊಸ ಕರಡು ವಿಧೇಯಕಗಳನ್ನು ಮಂಡಿಸಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳ ನಂತರ ಕೇಂದ್ರ ಸರ್ಕಾರ ಈ ಹಿಂದೆ ಲೋಕಸಭೆಯಲ್ಲಿ ಮಂಡಿಸಿದ್ದ ಕ್ರಿಮಿನಲ್ ಪ್ರೊಸೀಜರ್ ಕೋಡ್- ೧೮೯೮, ಭಾರತೀಯ ದಂಡ ಸಂಹಿತೆ- ೧೮೬೦, ಇಂಡಿಯನ್ ಎವಿಡೆನ್ಸ್ ಆಕ್ಟ್- ೧೮೭೨ ಒಳಗೊಂಡ ಮಸೂದೆಗಳನ್ನು ಹಿಂಪಡೆಯಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಮುಂಗಾರು ಅಧಿವೇಶನದ ವೇಳೆ ಈ ಮೂರು ವಿಧೇಯಕಗಳನ್ನು ಮಂಡಿಸಲಾಗಿತ್ತು. ಆದರೆ ಅವುಗಳಿಗೆ ಸಂಸದೀಯ ಸ್ಥಾಯಿ ಸಮಿತಿ ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು. ಹೀಗಾಗಿ ಇಂದು ಆ ಶಿಫಾರಸುಗಳನ್ನು ಒಳಗೊಂಡಿರುವ ಹೊಸ ಕರಡು ವಿಧೇಯಕಗಳನ್ನು ಮಂಡಿಸಿದರು. ಡಿಸೆಂಬರ್ ೧೧ ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಹಿಂಪಡೆಯಲಾಗುವುದು ಮತ್ತು ಸಂಸದೀಯ ಸಮಿತಿ ಶಿಫಾರಸು ಮಾಡಿದಿ ತಿದ್ದುಪಡಿಗಳನ್ನು ಒಳಗೊಂಡಿರುವ ಮೂರು ಹೊಸ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದರು. ಇಂದು ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಗೃಹ ಸಚಿವಾಲಯ, ಸಂಸದೀಯ ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ಹಲವಾರು ತಿದ್ದುಪಡಿಗಳನ್ನು ತರುವ ಬದಲು, ಬದಲಾವಣೆಗಳನ್ನು ಒಳಗೊಂಡಿರುವ ಹೊಸ ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಪಾಕಿಸ್ತಾನದಲ್ಲಿ ಉಗ್ರರ ದಾಳಿ: ೨೩ ಯೋಧರು ಸಾವು

ಇಸ್ಲಾಮಾಬಾದ್, ಡಿ. ೧೨: ಪಾಕಿಸ್ತಾನದ ತಾಲಿಬಾನ್‌ನೊಂದಿಗೆ ನಂಟು ಹೊಂದಿರುವ ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ ೨೩ ಯೋಧರು ಸಾವನ್ನಪ್ಪಿದ್ದಾರೆ. ಖೈಬರ್-ಪಕ್ತುಂಖ್ವಾದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಪೋಸ್ಟ್ಗೆ ಸ್ಫೋಟಕ ತುಂಬಿದ ಟ್ರಕ್‌ನ್ನು ಡಿಕ್ಕಿ ಹೊಡೆಸಿ ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಸೇನೆ ತಿಳಿಸಿದೆ. ದಕ್ಷಿಣ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಉಗ್ರರ ಪ್ರವೇಶ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಭಯೋತ್ಪಾದಕರು ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ - ಸೇನೆಯ ಮಾಧ್ಯಮ ವಿಭಾಗ ಹೇಳಿದೆ. ದಾಳಿಯ ನಂತರ ಮತ್ತೊಂದು ಆತ್ಮಹತ್ಯಾ ದಾಳಿ ನಡೆದಿದ್ದು, ಕಟ್ಟಡದ ಕುಸಿತವಾಗಿದೆ. ಇದರಿಂದ ಅನೇಕ ಸಾವುನೋವು ಉಂಟಾಗಿದೆ. ದಾರಬನ್ ಪ್ರದೇಶದಲ್ಲಿನ ಭದ್ರತಾ ಪಡೆಗಳ ಪೋಸ್ಟ್ ಮೇಲೆ ಆರು ಭಯೋತ್ಪಾದಕರ ಗುಂಪು ದಾಳಿ ಮಾಡಿದ್ದರಿಂದ ಕನಿಷ್ಟ ೨೩ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.