ಕಣಿವೆ, ಡಿ. ೧೨: ಯೋಗದಿಂದ ಬಹಳಷ್ಟು ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ಡಿಸೋಜ ಹೇಳಿದರು.
ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಜಂಟಿಯಾಗಿ ಆಯೋಜಿಸಿದ್ದ "ಯುವ ಮಾನಸಿಕ ಆರೋಗ್ಯದ ನಿರ್ವಹಣೆಗೆ ತಂತ್ರಗಳು" ಎಂಬ ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಎನ್ನುವುದು ಗುರುಗಳಿಂದ ಕಲಿಯಬೇಕೆ ವಿನಃ ದೂರದರ್ಶನ ಅಥವಾ ಪುಸ್ತಕಗಳಿಂದಲ್ಲ. ಯೋಗ ಮಾಡುವಾಗ ಆಗುವ ತಪ್ಪುಗಳನ್ನು ಗುರು ಸರಿಪಡಿಸಲು ಸಾಧ್ಯವೇ ಹೊರತು ಸಾಮಾಜಿಕ ಜಾಲತಾಣಗಳಿಂದ ಸಾಧ್ಯವಿಲ್ಲ ಎಂದು ಹೇಳಿದರು. ಕುಶಾನಗರ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಪಿ. ಜಯಂತಿ ಮಾತನಾಡಿ, ಮನುಷ್ಯನ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಅತ್ಯಗತ್ಯ ಎಂದರು. ಎವರೆಸ್ಟ್ ಡಿಸೋಜ ಅವರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಯೋಗದ ವಿಧಾನಗಳನ್ನು ಪ್ರದರ್ಶಿಸಿ ತರಬೇತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕರಾದ ಡಾ. ಬಿ.ಡಿ. ಹರ್ಷ, ಟಿ.ಎಂ. ಸುಧಾಕರ್, ಕೆ.ಪಿ. ಕುಸುಮ, ಎಸ್. ಸುನಿಲ್ ಕುಮಾರ್, ಕೆ.ಆರ್. ವಂದನ, ರಶ್ಮಿ, ಟಿ.ಎಂ. ದೀಪಾ, ಮಧುಶ್ರೀ, ಪಿ. ರಮೇಶ್ ಚಂದ್ರ, ಡಾ. ರಾಧಿಕ, ನಟರಾಜ್, ಮಹಾದೇವ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.