ಸೋಮವಾರಪೇಟೆ, ಡಿ. ೧೨ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಸದಸ್ಯರನ್ನು ಕಡೆಗಣಿಸಲಾಗಿದೆ. ತಪ್ಪು ನಿರ್ಣಯ ದಾಖಲು ಮಾಡಿ, ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಗೊಳಿಸಿದ್ದು, ಇದನ್ನು ಮುಂದೂಡಬೇಕೆAದು ಸದಸ್ಯರು ಆಗ್ರಹಿಸಿದ್ದಾರೆ.
ಪಟ್ಟಣ ಪಂಚಾಯಿತಿಗೆ ಸೇರಿದ ೬೦ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದಿನಾಂಕ ನಿಗದಿ, ಮಳಿಗೆ ಮೀಸಲಾತಿ ಸೇರಿದಂತೆ ಯಾವ ವಿಚಾರಕ್ಕೂ ಸದಸ್ಯರ ಅಭಿಪ್ರಾಯ ಪಡೆದಿಲ್ಲ ಹಾಗೂ ಗಮನಕ್ಕೂ ತಾರದೆ ಏಕಾಏಕಿ ಅಧಿಕಾರಿಗಳು ಹರಾಜು ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಹರಾಜು ಮುಂದೂಡುವAತೆ ಮನವಿ ಸಲ್ಲಿಸಿದರು.
ಸೆ.೧೩ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ ಸುದೀರ್ಘ ಚರ್ಚೆ ನಡೆದು, ನಗರದ ಅಭಿವೃದ್ಧಿ ಹಾಗೂ ವರ್ತಕರ ಹಿತದೃಷ್ಟಿಯಿಂದ ಸರ್ಕಾರದ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡುವ ಬಗ್ಗೆ ತೀರ್ಮಾನಿಸಿದ್ದರೂ, ಏಕಾಏಕಿ ಹರಾಜಿಗೆ ದಿನಾಂಕ ನಿರ್ಧರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ನಡುವೆ ನಿಗದಿ ಮಾಡಿದ್ದ ಎರಡು ಸಭೆಗಳನ್ನು ಮುಂದೂಡಿದ್ದಾರೆ. ಇದರಿಂದಾಗಿ ಸದಸ್ಯರ ಅಭಿಪ್ರಾಯ ತಿಳಿಸಲು ಅವಕಾಶವಾಗಿಲ್ಲ. ಆದ್ದರಿಂದ ಹಿಂದಿನ ಸಭೆಯ ನಿರ್ಣಯ ರದ್ದುಪಡಿಸಿ, ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು. ಶೀಘ್ರವಾಗಿ ಸಾಮಾನ್ಯ ಸಭೆ ಕರೆಯಬೇಕೆಂದು ಒತ್ತಾಯಿಸಿ ಸದಸ್ಯರು ಮುಖ್ಯಾಧಿಕಾರಿಗೆ ಮನವಿ ನೀಡಿದರು. ಈ ಬಗ್ಗೆ ಆಡಳಿತಾಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.
ಈ ಸಂದರ್ಭ ಮಾಜಿ ಸದಸ್ಯರುಗಳಾದ ಪಿ.ಕೆ ಚಂದ್ರು, ಶೀಲಾ ಡಿಸೋಜ, ಜೀವನ್, ಮೃತ್ಯುಂಜಯ, ಶುಭಕರ, ಮೋಹಿನಿ, ಮಹೇಶ್ ಹಾಜರಿದ್ದರು.