ಸೋಮವಾರಪೇಟೆ, ಡಿ. ೧೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ರೈತ ಸಂಘದಿAದ ಪಟ್ಟಣದ ಜೇಸೀ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಇತರ ಜಿಲ್ಲೆಯ ರೈತರಿಗೆ ಇರುವಂತೆ ಕೊಡಗಿನಲ್ಲಿಯೂ ರೈತರ ೧೦ ಹೆಚ್.ಪಿ. ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಇದರೊಂದಿಗೆ ರೈತರ ಜಮೀನುಗಳ ದುರಸ್ತಿ, ಪೋಡಿ ಆಗುತ್ತಿಲ್ಲ. ಪೋಡಿ ಮುಕ್ತ ತಾಲೂಕಿನ ಪಟ್ಟಿಯಲ್ಲಿ ಕೊಡಗಿನ ೫ ತಾಲೂಕುಗಳನ್ನೂ ಸೇರ್ಪಡೆಗೊಳಿಸಬೇಕು. ಕೃಷಿ ಫಸಲು ನಾಶಕ್ಕೆ ವೈಜ್ಞಾನಿಕವಾಗಿ ಪರಿಹಾರ ಒದಗಿಸಬೇಕು. ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರೈತ ಸಂಘದ ಪದಾಧಿಕಾರಿಗಳು ಧರಣಿ ನಡೆಸಿದರು.

ಧರಣಿಯಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಘಟಕದ ಸಂಚಾಲಕ ಹೂವಯ್ಯ ಅವರು, ಜಿಲ್ಲೆಯ ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ. ವಿದ್ಯುತ್‌ಗಾಗಿ ಕಳೆದ ಅಧಿವೇಶನ ಸಂದರ್ಭ ೨೧ ದಿನ ಹೋರಾಟ ನಡೆಸಿದರೂ ಪರಿಹಾರ ಕಂಡಿಲ್ಲ. ಈಗಲೂ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಹಣ ಕಟ್ಟುವಂತೆ ಒತ್ತಾಯಿಸುತ್ತಿದ್ದು, ಸಂಪರ್ಕ ಕಡಿತಗೊಳಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ಇದು ಮುಂದುವರೆದರೆ ರೈತರು ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಗೆ ಒತ್ತಾಯಿಸಿ ಈಗಾಗಲೇ ಶಾಸಕರು, ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ರಾಜ್ಯಾದ್ಯಂತ ಇರುವಂತೆ ಕೊಡಗಿನ ಕಾಫಿ ಬೆಳೆಗಾರರಿಗೂ ಸೌಲಭ್ಯ ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಈವರೆಗೆ ಪರಿಹಾರ ಲಭಿಸಿಲ್ಲ. ರೈತರಿಗೆ ಬಿಡಿಗಾಸಿನ ಪರಿಹಾರ ನೀಡುವ ಬದಲು ವೈಜ್ಞಾನಿಕ ಮಾದರಿ ಅನುಸರಿಸಿ ಶೀಘ್ರದಲ್ಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಧರಣಿಯ ನೇತೃತ್ವ ವಹಿಸಿದ್ದ ರೈತ ಸಂಘದ ಅಧ್ಯಕ್ಷ ದಿನೇಶ್ ಆಗ್ರಹಿಸಿದರು.

ಹಲವಷ್ಟು ಸಮಸ್ಯೆಗಳ ನಡುವೆಯೂ ರೈತರು ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ರೈತರ ಮಕ್ಕಳ ಭವಿಷ್ಯವೂ ಕಷ್ಟದಲ್ಲಿದೆ. ಈ ಹಿನ್ನೆಲೆ ರೈತ ಕುಟುಂಬದ ಗಂಡು ಮಕ್ಕಳ ವಿವಾಹ ಸಂದರ್ಭ ವಧುವಿನ ಖಾತೆಗೆ ಸರ್ಕಾರ ೫ ಲಕ್ಷ ರೂಪಾಯಿ ಜಮೆ ಮಾಡುವ ಮೂಲಕ ಪ್ರೋತ್ಸಾಹ ಧನ ವಿತರಿಸಬೇಕು ಎಂದರು.

ಪ್ರಸ್ತುತ ಬರಗಾಲ ಘೋಷಣೆಯಾಗಿರುವುದರಿಂದ ರೈತರ ಬ್ಯಾಂಕ್ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ವನ್ಯಜೀವಿ ಮಾನವ ಸಂಘರ್ಷದಲ್ಲಿ ಜೀವಹಾನಿಯಾದರೆ ಅಂತಹ ರೈತರ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ಒದಗಿಸಬೇಕು. ರೈತರಿಗೆ ನಿರಂತರ ವಿದ್ಯುತ್ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿಯೇ ಆದ್ಯತೆಯ ಮೇರೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಗಳನ್ನು ಬಹಿಷ್ಕರಿಸಲು ರೈತರು ಮುಂದಾಗಬೇಕಾಗುತ್ತದೆ ಎಂದು ಅಧ್ಯಕ್ಷ ದಿನೇಶ್ ಎಚ್ಚರಿಸಿದರು.

ಈ ಸಂಬAಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಲಕ್ಷö್ಮಣ, ಗರಗಂದೂರು, ಮಚ್ಚಂಡ ಅಶೋಕ್, ಲಿಂಗೇರಿ ರಾಜೇಶ್, ಐ.ಎಸ್. ನಿಂಗಪ್ಪ ಇನಕನಹಳ್ಳಿ, ಎ.ಆರ್. ಕುಶಾಲಪ್ಪ ಯಡೂರು, ಯು.ಕೆ. ರಾಜಶೇಖರ್ ಕೂತಿ, ಪ್ರಸನ್ನ ಕೊಡ್ಲಿಪೇಟೆ, ಬಗ್ಗನ ಅನಿಲ್, ಶನಿವಾರಸಂತೆ ಪುಟ್ಟಸ್ವಾಮಿ, ಕೂಗೂರು ಸಂದೀಪ್, ಸ್ವಾಮಿ, ಹಿರಿಕರ ರಮೇಶ್, ಕಿಬ್ಬೆಟ್ಟ ಮಂದಣ್ಣ, ಹೆಗ್ಗಳ ಮಾದಪ್ಪ, ಡಾಲಿ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.