ಕಣಿವೆ, ಡಿ. ೧೨: ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬೋಧಕೇತರ ಸಿಬ್ಬಂದಿಗಳನ್ನು ಸೇವೆಯಿಂದ ಕೈಬಿಟ್ಟ ಕ್ರಮವನ್ನು ಖಂಡಿಸಿ ಕೊಡಗು ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಹೊರಗುತ್ತಿಗೆ ನೌಕರರು ಪ್ರತಿಭಟಿಸಿದ ಪ್ರಸಂಗ

ನಡೆಯಿತು.

ಕೊಡಗು ವಿವಿಯಾಗಿ ಘೋಷಣೆಯಾಗುವ ಮುನ್ನ ಮಂಗಳೂರು ವಿಶ್ವವಿದ್ಯಾಲಯದಿಂದ ತಾತ್ಕಾಲಿಕವಾಗಿ ನೇಮಕ ಮಾಡಿದ್ದ ಕಚೇರಿಯ ಅಟೆಂಡರ್‌ಗಳು, ಸ್ವಚ್ಛತಾ ಸಿಬ್ಬಂದಿಗಳು, ಡೇಟಾ ಎಂಟ್ರಿ, ಪ್ರಯೋಗಾಲಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಈ ಮಧ್ಯೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಬಂದ ಪತ್ರದ ಆದೇಶದಂತೆ ವಿವಿಗಳಲ್ಲಿನ ಅನಗತ್ಯ ಆರ್ಥಿಕ ಹೊರೆ ತಪ್ಪಿಸಲು ಸಿಬ್ಬಂದಿಗಳ ಕಡತಕ್ಕೆ ನೀಡಿದ್ದ ನಿರ್ದೇಶನದಂತೆ ಕೆಲವು ಸಿಬ್ಬಂದಿಗಳನ್ನು ಕೈಬಿಡಲಾಗಿತ್ತು. ಇದೀಗ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರು ಪುನರ್ ನೇಮಕ ಮಾಡಿಕೊಳ್ಳಬೇಕೆಂದು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾನಿರತರು ಹೇಳಿದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಘೋಷಿಸಿದ ಕೊಡಗು ವಿವಿಗೆ ಸರ್ಕಾರದಿಂದ ಇದುವರೆಗೂ ಬಿಡಿಗಾಸು ಅನುದಾನ ಬಾರದ ಹಿನ್ನೆಲೆಯಲ್ಲಿ ಆರ್ಥಿಕವಾದ ಹೊರೆ ತಪ್ಪಿಸಲು ಸರ್ಕಾರದ ಆದೇಶ ಬಂದ ಕಾರಣ ಅನಗತ್ಯವಾದ ಸಿಬ್ಬಂದಿಗಳನ್ನು ಕೈಬಿಡಲಾಗಿದೆ. ಆದರೆ ನಮಗೆ ಯಾವುದೇ ಸಿಬ್ಬಂದಿಗಳನ್ನು ನೇಮಕ ಮಾಡುವ ಅಥವಾ ತೆಗೆದುಹಾಕುವ ಅಧಿಕಾರವಿಲ್ಲ ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮಾಹಿತಿ ನೀಡಿದರು.

ಬಿಡಿಗಾಸು ಅನುದಾನವಿಲ್ಲ

ಕೊಡಗು ವಿವಿಯನ್ನು ಹೊಸ ವಿವಿಯಾಗಿ ಘೋಷಿಸಿದ ಹಿಂದಿನ ಬಿಜೆಪಿ ಸರ್ಕಾರದಿಂದ ಆಗಲೀ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಾಗಲೀ ನೂತನ ಕೊಡಗು ವಿವಿಗೆ ಬಿಡಿಗಾಸು ಅನುದಾನ ಬರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರವೂ ಕೂಡ ಇದುವರೆಗೆ ನಯಾಪೈಸೆ ಅನುದಾನ ನೀಡಿಲ್ಲ.

ಕುಲಪತಿಗಳಿಗೂ ವೇತನವಿಲ್ಲ ?

ಸರ್ಕಾರ ಹೊಸದಾಗಿ ಘೋಷಿಸಿದ ರಾಜ್ಯದ ವಿವಿಧ ಏಳು ಹೊಸ ವಿವಿಗಳ ಕುಲಪತಿಗಳಿಗೆ ಇದುವರೆಗೂ ವೇತನವನ್ನೇ ಬಿಡುಗಡೆ ಮಾಡಿಲ್ಲ. ಈ ಪೈಕಿ ಕೊಡಗು ವಿವಿ ಕುಲಪತಿಗೂ ಇಲ್ಲ ಎಂಬ ಆತಂಕಕಾರಿ ವಿಚಾರ ನಿಜಕ್ಕೂ ಸರ್ಕಾರಕ್ಕೆ ನಾಚಿಕೆಗೇಡಿನ ವಿಚಾರ.

ಅಭಿವೃದ್ಧಿ ಮರೀಚಿಕೆ

ಹೊಸ ವಿವಿ ಅಭಿವೃದ್ಧಿಗೆ ಸಂಬAಧಿಸಿದ ಹೊಸ ಗುರಿಗಳು, ಹೊಸ ಹೊಸ ಆಲೋಚನೆಗಳೊಂದಿಗೆ ಹೊಸ ಹುರುಪಿನಿಂದ ಕೆಲಸ ಮಾಡುತ್ತಿರುವ ಕುಲಪತಿಗಳಿಗೆ ವೇತನವನ್ನೂ ನೀಡುವ ಮೂಲಕ ವಿವಿಯ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡಬೇಕಿದೆ.

ಉನ್ನತ ಶಿಕ್ಷಣದಲ್ಲಿ ಹಿಂದೆ

ದೇಶಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವೀರಯೋಧರು ಹಾಗೂ ಅಪಾರ ಕ್ರೀಡಾ ಕಲಿಗಳನ್ನು ಸಮರ್ಪಣೆ ಮಾಡಿರುವ ಕೊಡಗು ಜಿಲ್ಲೆ ಶೈಕ್ಷಣಿಕವಾಗಿ ಭಾರೀ ಹಿಂದುಳಿದ ಜಿಲ್ಲೆ ಎಂದರೆ ನಾಚಿಕೆಗೇಡಿನ ಸಂಗತಿಯಾಗಿದೆ.(ಮೊದಲ ಪುಟದಿಂದ) ಇದುವರೆಗೂ ಜಿಲ್ಲಾ ಕೇಂದ್ರ ಮಡಿಕೇರಿಯ ಎಡಕ್ಕೆ ಮಂಗಳೂರು ವಿವಿ ಹಾಗೂ ಬಲಕ್ಕೆ ಮೈಸೂರು ವಿವಿಗಳನ್ನು ಹೊಂದಿದ್ದರೂ ಕೂಡ ಕೊಡಗು ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.೧೫ ಎಂದರೆ ನಾಚಿಕೆಗೇಡಿನ ಸಂಗತಿಯಾಗಿದೆ. ಅಂದರೆ, ನೆರೆಯ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ.೨೫ ರಿಂದ ೩೦ ರಷ್ಟಿದೆ. ಹಾಗೆಯೇ ನೆರೆ ರಾಜ್ಯ ತಮಿಳುನಾಡಿನಲ್ಲಿ ಇದು ಶೇ ೫೫ ರಿಂದ ೬೦ ರಷ್ಟಿದೆ. ಇನ್ನು ಶೈಕ್ಷಣಿಕವಾಗಿ ಅತ್ಯಂತ ಕಡಿಮೆ ರೇಷಿಯೋ ಚಾಮರಾಜನಗರ ಜಿಲ್ಲೆಯಾಗಿದೆ.

ಅಂದರೆ ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ಹಂಬಲವುಳ್ಳ ಹೆಣ್ಣುಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ದೂರದ ನಗರಗಳಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿರುವುದು, ಹಾಗೆಯೇ ಕಡುಬಡತನದ ಬೇಗೆಯಲ್ಲಿ ಬೇಯುತ್ತಿರುವ ಇತರ ಬಡ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ, ಗುಡ್ಡಗಾಡು ಪ್ರದೇಶಗಳ ೧೮ ರಿಂದ ೨೩ ರ ವಯೋಮಿತಿಯ ಮಕ್ಕಳು ದೂರದ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ - ಗತಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಮನಗಂಡ ಸರ್ಕಾರ ಜಿಲ್ಲೆಗೊಂದು ವಿವಿ ಪರಿಕಲ್ಪನೆಯಂತೆ ಕೊಡಗು ಜಿಲ್ಲೆಗೂ ನೂತನ ವಿವಿಯನ್ನು ಘೋಷಿಸಿರುವುದು ಶೈಕ್ಷಣಿಕವಾಗಿ ಹಿಂದುಳಿದ ಭಾಗದ ಜನರಿಗೆ ಸಿಕ್ಕ ಬಹು ದೊಡ್ಡ ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ.

ಅಭಿವೃದ್ಧಿಗೆ ಮುಂದಾದ ವಿವಿಗಳು

ಹೊಸ ವಿವಿ ಘೋಷಣೆ ಮಾಡಿದ ಬಳಿಕ ಸರ್ಕಾರದಿಂದ ಇದೂವರೆಗೂ ಯಾವುದೇ ಅನುದಾನಗಳು ಹರಿದು ಬರದಿದ್ದರೂ ಕೂಡ ತಮ್ಮದೇ ಆದ ಹೊಸ ಅಭಿವೃದ್ಧಿಯ ಆಲೋಚನೆಗಳೊಂದಿಗೆ ಹೊಸದಾಗಿ ರಚನೆಯಾದ ಬಹುತೇಕ ಎಲ್ಲಾ ಹೊಸ ವಿವಿಗಳ ಕುಲಪತಿಗಳು ತಮ್ಮ ಪರಿಧಿಗೆ ಬರುವ ಮಹಾವಿದ್ಯಾಲಯಗಳ ಸಂಯೋಜನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.ಪದವಿ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೂ ಚಾಲನೆ ನೀಡಿದ್ದಾರೆ.

ಯೂನಿವರ್ಸಿಟಿ ಗ್ರಾಂಟ್ ಕಮಿಷನ್ ನಿಂದ ೨ ಎಫ್ ಮಾನ್ಯತೆ ಕೂಡ ಪಡೆಯಲಾಗಿದೆ. ಹಾಗೂ ಸರ್ಕಾರಗಳಿಂದ ದೊರಕಬಹುದಾದ ವಿವಿಧ ರೀತಿಯ ಅನುದಾನಗಳಿಗಾಗಿ ೧೨ ಬಿ ಪ್ರಕ್ರಿಯೆಗಳು ಕೂಡ ನಡೆದಿವೆ. ಕಳೆದ ಆಗಸ್ಟ್ ೧೮ ರಂದು ಮೂಲ ವಿಶ್ವವಿದ್ಯಾನಿಲಯಗಳಿಂದ ಹೊಸ ವಿವಿಗಳನ್ನು ಬೇರ್ಪಡಿಸುವ ಸಂಬAಧ ಸರ್ಕಾರ ಆದೇಶವನ್ನೂ ಕೂಡ ಹೊರಡಿಸಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಸರ್ಕಾರ ಹೊಸ ವಿವಿಗಳಿಗೆ ಪೂರಕವಾದ ಅನುದಾನ ನೀಡದ ತಟಸ್ಥ ನೀತಿಯ ವಿರುದ್ಧ ಶಿಕ್ಷಣ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ತಾತ್ಸಾರ ಧೋರಣೆ

ಜಿಲ್ಲೆಗೊಂದು ಯೂನಿವರ್ಸಿಟಿ ಎಂಬ ಆಕರ್ಷಕ ಘೋಷಣೆಯಡಿ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಕೊಡಗು, ಹಾಸನ, ಬಾಗಲಕೋಟೆ, ಕೊಪ್ಪಳ, ಬೀದರ್, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ತೆರೆದಿದ್ದ ಹೊಸ ವಿವಿಗಳು ಬಿಜೆಪಿಯ ವಿವೇಚನಾ ರಹಿತ ಹಾಗೂ ಸ್ವಹಿತಾಸಕ್ತಿಯ ಧೋರಣೆ ಎಂದು ಟೀಕಿಸಿರುವ ಈಗಿನ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರ ಹೊಸ ವಿವಿಗಳನ್ನು ಮುಚ್ಚುವ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಗೂ, ಈಗ ಯಾವುದೇ ಅನುದಾನ ಬಿಡುಗಡೆ ಮಾಡದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಕೊಡಗಿನ ವೀರಯೋಧರು, ಕ್ರೀಡೆ ಹಾಗೂ ಶಿಕ್ಷಣ ಪ್ರೇಮಿಗಳು, ಸಾಹಿತಿಗಳು ರಾಜ್ಯ ಸರ್ಕಾರದ ವಿರುದ್ಧ ಬಹು ದೊಡ್ಡ ಸಮರವನ್ನೇ ಸಾರುವ ಮೂಲಕ

ಕೊಡಗು ವಿವಿಯನ್ನು ಉಳಿಸುವ ಮಹಾ ಆಂದೋಲನಕ್ಕೆ ಮುಂದಾಗಬೇಕಿದೆ.

-ವಿಶೇಷ ವರದಿ : ಕೆ.ಎಸ್.ಮೂರ್ತಿ