ಶನಿವಾರಸಂತೆ, ಡಿ. ೧೨: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಭಾಗಿತ್ವದಲ್ಲಿ ಗ್ರಂಥಾಲಯ ಇಲಾಖೆಯ ಓದುವ ಬೆಳಕು ಕಾರ್ಯಕ್ರಮದಡಿ ‘ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ’ ಅಭಿಯಾನ ಕಾರ್ಯಕ್ರಮ ಗ್ರಂಥಾಲಯದಲ್ಲಿ ನಡೆಯಿತು.

ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾತನಾಡಿ, ಬಾಲ್ಯವನ್ನು ಸಂಭ್ರಮಿಸುವುದರ ಜೊತೆಗೆ ಒಟ್ಟಿಗೆ ಬೆಳೆಯುವ ಅವಕಾಶ ಪಡೆದುಕೊಳ್ಳುವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಓದುವ ಬೆಳಕು ಕಾರ್ಯಕ್ರಮದ ಉದ್ದೇಶ ಎಂದರು.

ಮಕ್ಕಳಿಗೆ ಸಾಹಿತ್ಯ, ವಿಜ್ಞಾನ, ಪ್ರಾಣಿ, ಪಕ್ಷಿ, ಇತ್ಯಾದಿ ಕುರಿತ ಪುಸ್ತಕ, ಪ್ರಖ್ಯಾತ ಸಾಹಿತಿಗಳ ಕೃತಿಗಳು, ಸಮಗ್ರ ಮಾಹಿತಿಗಳ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. ಕಡಲ ತೀರ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಇತ್ಯಾದಿ ಚಿತ್ರವನ್ನು ಬಿಡಿಸುವ ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.