ಮಡಿಕೇರಿ, ಡಿ. ೧೦: ೬೪ ವರ್ಷದ ವೃದ್ಧನಿಗೆ ಮದುವೆ ಮಾಡಿಸಿ ಬಳಿಕ ಆತನನ್ನು ಬೆದರಿಸಿ ರೂ. ೧೦ ಲಕ್ಷ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳದ ಅಬ್ದುಲ್ ಬಷೀರ್ (೨೯), ಕಡಬದ ಸಾದಿಕ್ (೩೦) ಎಂಬವರುಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಫೈಝಲ್ (೫೩) ಮೈಸೂರಿನಲ್ಲಿ ನಡೆದ ಅಪರಾಧ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ, ತಲೆಮರೆಸಿ ಕೊಂಡಿರುವ ಅಮೀರ್ ಎಂಬಾತನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
ಏನಿದು ಘಟನೆ?
ಕೇರಳ ರಾಜ್ಯ ಎರ್ನಾಕುಲಂ ಜಿಲ್ಲೆ ಮೂಲದ ಭಾರತೀಯ ಸೇನೆಯ ನಿವೃತ್ತ ಯೋಧ ಜಾನ್ ಮ್ಯಾಥ್ಯು (೬೪) ಎಂಬವರು ಅವಿವಾಹಿತ ರಾಗಿದ್ದು, ಇವರೊಂದಿಗೆ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಫೈಝಲ್ ಎಂಬಾತ ಜಾನ್ ಅವರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ, ತನ್ನ ಪರಿಚಯಸ್ಥರ ಹುಡುಗಿ ಇರುವುದಾಗಿ ಹೇಳಿ ನ. ೧೬ ರಂದು ಮಡಿಕೇರಿಗೆ ಕರೆ ತಂದಿದ್ದಾನೆ.
ಫೈಝಲ್ನೊಂದಿಗೆ ಅಬ್ದುಲ್ ಬಷೀರ್, ಸಾದಿಕ್ ಮತ್ತು ಅಮೀರ್ ಸೇರಿ ಮಡಿಕೇರಿಯ ಹೋಂಸ್ಟೇ ಒಂದಕ್ಕೆ ಬಂದು ತಂಗಿ ಅಲ್ಲಿಗೆ ಮಹಿಳೆಯೊಬ್ಬರನ್ನು ಕರೆಸಿ ತಕ್ಷಣ ಮದುವೆ ಮಾಡಿಸಿದ್ದಾರೆ. ಬಳಿಕ ಮದುವೆಯ ಭಾವಚಿತ್ರವನ್ನು ನಿಮ್ಮ ಕುಟುಂಬಕ್ಕೆ ತೋರಿಸಲಾಗುತ್ತದೆ ಎಂದು ಜಾನ್ ಮ್ಯಾಥ್ಯು ಅವರನ್ನು ಆರೋಪಿಗಳು ಬೆದರಿಸಿ ರೂ. ೧೦ ಲಕ್ಷಕ್ಕೆ ಬೇಡಿಕೆಯೊಡ್ಡಿದ್ದಾರೆ. ಜಾನ್ ರೂ. ೮ ಲಕ್ಷ ನಗದು ಹಾಗೂ ರೂ. ೨.೧೦ ಲಕ್ಷ ಚೆಕ್ ನೀಡಿದ್ದಾರೆ.
ಘಟನೆ ಕುರಿತು ಜಾನ್ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಕೈಗೊಂಡ ಪೊಲೀಸರು ಸಾಕ್ಷಾö್ಯಧಾರ ಕಲೆಹಾಕಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಅವರಿಂದ ರೂ ೧.೫ ಲಕ್ಷ ನಗದು ಹಾಗೂ ರೂ. ೨.೧೦ ಲಕ್ಷದ ಚೆಕ್, ಕೃತ್ಯಕ್ಕೆ ಬಳಸಿದ ೩ ಮೊಬೈಲ್ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಮಡಿಕೇರಿ ಡಿವೈಎಸ್ಪಿ ಎಂ. ಜಗದೀಶ್, ಸಿಪಿಐ ಅನೂಪ್ ಮಾದಪ್ಪ, ಡಿಸಿಆರ್ಬಿ ಪಿಐ ಐ.ಪಿ. ಮೇದಪ್ಪ, ನಗರ ಪಿಎಸ್ಐ ಲೋಕೇಶ್ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.