ಶನಿವಾರಸಂತೆ, ಡಿ. ೧೧: ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.

ತಜ್ಞ ವೈದ್ಯರಿಂದ ಉಚಿತ ಕಣ್ಣು ಮತ್ತು ದಂತದ ಪ್ರಾಥಮಿಕ ತಪಾಸಣೆಯನ್ನು ಏರ್ಪಡಿಸಿದ್ದು ಕೊಡ್ಲಿಪೇಟೆಯ ದಂತ ವೈದ್ಯರು ಹಾಗೂ ಹಾಸನ ಕೇಶವ ನೇತ್ರಾಲಯದ ವೈದ್ಯರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಪೋಷಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಪೋಷಕರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪುಷ್ಪ ಜೋಡಣೆ ಪ್ರದರ್ಶನ ಹಾಗೂ ಸ್ಪರ್ಧೆಯೂ ನಡೆಯಿತು.

೪ ರಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂತೆ ಮಾರುಕಟ್ಟೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ, ಹೊಲಗದ್ದೆಗಳಲ್ಲಿ ಬೆಳೆದಿದ್ದ ಹಣ್ಣು, ಸೊಪ್ಪು-ತರಕಾರಿ, ಗೆಡ್ಡೆಗೆಣಸು, ತೆಂಗಿನಕಾಯಿ ಹಾಗೂ ಮನೆಯಲ್ಲೆ ತಯಾರಿಸಿದ ವೈವಿಧ್ಯಮಯ ತಿಂಡಿ-ತಿನಸುಗಳನ್ನು ತಂದು ಮಾರಾಟ ಮಾಡಿದರು. ಶಿಕ್ಷಕರು, ಪೋಷಕರು ಖರೀದಿಸಿ ಪ್ರೋತ್ಸಾಹಿಸಿದರು.

ಪ್ರಾಂಶುಪಾಲೆ ಡಿ. ಸುಜಲಾದೇವಿ ಮಾತನಾಡಿ, ಮಕ್ಕಳ ಆರೋಗ್ಯದ ಜತೆಯಲ್ಲಿ ಪೋಷಕರ ಆರೋಗ್ಯವೂ ಮುಖ್ಯವಾಗಿದ್ದು ಇಬ್ಬರಿಗೂ ಉಚಿತ ದಂತ ಮತ್ತು ನೇತ್ರ ತಪಾಸಣೆಯನ್ನು ಏರ್ಪಡಿಸಿದ್ದೆವು. ವಾರ್ಷಿಕೋತ್ಸವ ಪ್ರಯುಕ್ತ ಪೋಷಕರಿಗೂ ಮಕ್ಕಳ ಜತೆಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಪರಸ್ಪರ ಭಾಂದವ್ಯ ಬೆಸೆಯುವ ಕಾರ್ಯಕ್ರಮ ಇದಾಗಿದೆ ಎಂದರು. ಸಹಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ಹಾಜರಿದ್ದರು.