ಶನಿವಾರಸಂತೆ, ಡಿ. ೯: ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಕ್ರೀಡಾಕೂಟ ವನ್ನು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಪುಟ್ಟರಾಜು ಉದ್ಘಾಟಸಿದರು.
ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ವಿದ್ಯಾಸಂಸ್ಥೆಯ ಕ್ರೀಡಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕ-ಬಾಲಕಿಯರ ಟೆನ್ನಿಕಾಯ್ಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಪುಟ್ಟರಾಜು, ಕ್ರೀಡಾಪಟುಗಳು ಕ್ರೀಡೆಯಲ್ಲಿ ಸ್ಪರ್ಧಿಸುವುದಕ್ಕೆ ಆದ್ಯತೆ ನೀಡಿ, ಸೋಲು-ಗೆಲುವನ್ನು ಸಮಾನವಾಗಿ ಕಾಣಬೇಕು. ಸೋಲು-ಗೆಲುವು ಒಬ್ಬರಿಗೇ ಮೀಸಲಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ರಾಜ್ಯಮಟ್ಟದ ಕ್ರೀಡಾಕೂಟ ಶನಿವಾರ ಸಂತೆ ಭಾರತಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಕ್ರೀಡೆಗೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮುಖ್ಯ ಎಂದರು. ಸಮಾರಂಭದಲ್ಲಿ ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಕಾಂತರಾಜ್ ಹಾಗೂ ಗಿರಿರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ಜಗನ್ ಪಾಲ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವನ್ನು ಗಂಭೀರವಾಗಿ ಪರಿಗಣಿಸದೇ ಶ್ರದ್ಧೆಯಿಂದ ಭಾಗವಹಿಸುವುದೇ ಮುಖ್ಯವೆಂದು ಕ್ರೀಡಾಪಟುಗಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಖಜಾಂಚಿ ಪಿ. ಆನಂದ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಶ, ಕಾರ್ಯದರ್ಶಿ ಎನ್.ಕೆ. ಅಪ್ಪಸ್ವಾಮಿ, ನಿರ್ದೇಶಕರಾದ ಆನಂದ್, ಎನ್.ಬಿ. ನಾಗಪ್ಪ, ರಂಗಸ್ವಾಮಿ, ಎನ್.ಜಿ. ಅನಿಲ್, ಮಹಮ್ಮದ್ ಗೌಸ್, ಬಿ.ಕೆ. ಚಿಣ್ಣಪ್ಪ, ಉತ್ತಪ್ಪ, ಪ್ರಾಂಶುಪಾಲ ಎಸ್.ಜೆ. ಅಶೋಕ್, ಮುಖ್ಯಶಿಕ್ಷಕ ಪಿ. ನರಸಿಂಹ ಮೂರ್ತಿ, ನಿವೃತ್ತ ಪ್ರಾಂಶು ಪಾಲ ಸಿ.ಎಂ. ಪುಟ್ಟಸ್ವಾಮಿ, ಇತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಎಸ್.ಜೆ. ಅಶೋಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ಗಾನವಿ ಮತ್ತು ತಂಡ ದವರು ಪ್ರಾರ್ಥಿಸಿ, ಉಪನ್ಯಾಸಕ ಸೋಮಶೇಖರ್ ನಿರೂಪಿಸಿ, ಉಪನ್ಯಾಸಕಿ ಮಧು ವಂದಿಸಿದರು.