ವೀರಾಜಪೇಟೆ, ಡಿ. ೧೦ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವೀರಾಜಪೇಟೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು ಇವುಗಳ ಆಶ್ರಯದಲ್ಲಿ ಬಿಟ್ಟಂಗಾಲದ ಪ್ರಗತಿಪರ ಕೃಷಿಕರಾದ ಈರಪ್ಪ ಅವರ ಮನೆಯಲ್ಲಿ ತೋಟಗಾರಿಕಾ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಬೇಸಾಯ ಶಾಸ್ತç ವಿಭಾಗದ ವಿಜ್ಞಾನಿಗಳಾದ ಡಾ. ವೀರೇಂದ್ರ ಕುಮಾರ್ ಮಾತನಾಡಿ, ಕೊಡಗಿನಲ್ಲಿ ಕಾಫಿ ಮತ್ತು ಕಾಳುಮೆಣಸು ಬೇಸಾಯ ಹೆಚ್ಚಿದೆ ಬೆಳೆಗಳನ್ನು ಬೆಳೆಯುವಾಗ ಮಣ್ಣು ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಬೇಕು. ಜಮೀನಿನ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಕೃಷಿ ವಿಜ್ಞಾನ ಕೇಂದ್ರಕ್ಕೆ ನೀಡಿದರೆ ಪರೀಕ್ಷೆ ಮಾಡಿಕೊಡಲಾಗುತ್ತದೆ. ಪರೀಕ್ಷೆ ವರದಿ ಆಧಾರದಲ್ಲಿ ಮಣ್ಣಿಗೆ ನೀಡಬೇಕಾದ ರಾಸಾಯನಿಕ ಗೊಬ್ಬರವನ್ನು ಬಳಸುವಂತೆ ಸಲಹೆ ನೀಡಿದರು. ಕೊಡಗಿಗೆ ಸೂಕ್ತ ಕಾಳುಮೆಣಸು ತಳಿಗಳಾದ ಕೂರ್ಗ್ ಎಕ್ಸೆಲ್ ಮತ್ತು ತೇವಂ ತಳಿಗಳ ಬಗ್ಗೆ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ಈ ಸಂದರ್ಭ ಬಿಟ್ಟಂಗಾಲ ಒಕ್ಕೂಟದ ಅಧ್ಯಕ್ಷ ರಂಜನ್, ಊರಿನ ಹಿರಿಯರಾದ ಜೋಯಪ್ಪ, ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್, ಸೇವಾಪ್ರತಿನಿಧಿ ಸಬಿತಾ ಹಾಜರಿದ್ದರು.