ಚಿತ್ರ, ವರದಿ : ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಡಿ. ೯: ತಡರಾತ್ರಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ರೂ. ೫೦ ಲಕ್ಷ ದೋಚಿದ ಘಟನೆ ಗೋಣಿಕೊಪ್ಪ ಸಮೀಪದ ದೇವರಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ದರೋಡೆಗೆ ಒಳಗಾಗಿ ಹಣವನ್ನು ಕಳೆದುಕೊಂಡು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಗುತ್ತಿಗೆದಾರ ಶಂಜ್ಜಾದ್ (೩೮) ಎಂದು ತಿಳಿದುಬಂದಿದೆ. ಪ್ರಕರಣ ಸಂಬAಧ ಐಜಿಪಿ ಬೋರಲಿಂಗಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ದರೋಡೆ ಪ್ರಕರಣ ಭೇದಿಸಲು ಮೂರು ವಿಶೇಷ ತಂಡ ರಚಿಸಿದ್ದಾರೆ.

ದರೋಡೆಗೆ ಒಳಗಾದ ವ್ಯಕ್ತಿ, ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಶಂಜ್ಜಾದ್ ಎಂಬವರು ತನ್ನ ಸ್ನೇಹಿತನಾದ ಅಫ್ನು ಎಂಬಾತನೊAದಿಗೆ ಕೇರಳದಿಂದ ತನ್ನ ಪತ್ನಿಯ ಚಿನ್ನಾಭರಣವನ್ನು ತೆಗೆದುಕೊಂಡು ಮೈಸೂರಿಗೆ ತೆರಳಿ ಮಾರಾಟ ಮಾಡಿ ಅದರಿಂದ ಬಂದ ರೂ. ೫೦ ಲಕ್ಷ ಹಣವನ್ನು ಕೇರಳಕ್ಕೆ ಕೊಂಡೊಯ್ಯುವ ಸಂದರ್ಭ ದೇವರಪುರ ಸಮೀಪ ದುಷ್ಕರ್ಮಿಗಳು ಈ ಕೃತ್ಯವೆಸÀಗಿದ್ದಾರೆ.

ಚಿನ್ನಾಭರಣ ಮಾರಿದ ಹಣ

ಹಣ ಕಳೆದುಕೊಂಡ ಶಂಜ್ಜಾದ್ ಈ ಸಂಬAಧ ದೂರು ನೀಡಿದ್ದು, ಅದರನ್ವಯ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ಶಂಜ್ಜಾದ್ ಗುತ್ತಿಗೆದಾರನಾಗಿದ್ದು, ಕೆಲಸದ ಸಂಬAಧ ಹಣದ ಅವಶ್ಯಕತೆ ತಲೆದೋರಿದೆ. ಈ ಹಿನ್ನೆಲೆ ಶಂಜ್ಜಾದ್ ಪತ್ನಿ ಜೂನಾಗೆ ಮದುವೆ ಸಮಯದಲ್ಲಿ ಅವರ ಕುಟುಂಬ ನೀಡಿದ ಹಾಗೂ ಖರೀದಿಸಿದ್ದ ಒಟ್ಟು ೭೫೦ ಗ್ರಾಂ ತೂಕದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

(ಮೊದಲ ಪುಟದಿಂದ) ಆ ಬಳಿಕ ಶಂಜ್ಜಾದ್ ಸ್ನೇಹಿತ ಕೇರಳದ ಅಕ್ಕಸಾಲಿಗ ಸತೀಶ್ ಎಂಬವರಿಗೆ ಚಿನ್ನಾಭರಣ ಕರಗಿಸಿ ಗಟ್ಟಿ ಮಾಡಿಕೊಡುವಂತೆ ನೀಡಿದ್ದು, ನಂತರ ಅದನ್ನು ಕರಗಿಸಿ ತಾ. ೭ ರಂದು ಗಟ್ಟಿ ಮಾಡಿ ನೀಡಿದ್ದಾರೆ. ಮೈಸೂರಿನಲ್ಲಿ ಆಭರಣ ಮಾರಾಟ ಮಾಡಿದರೆ ಹೆಚ್ಚಿನ ಹಣ ದೊರೆಯುತ್ತದೆ ಎಂಬ ಸತೀಶ್ ಸಲಹೆ ಮೇರೆಗೆ ಶಂಜ್ಜಾದ್ ಹಾಗೂ ಆತನ ಸ್ನೇಹಿತ ಕೊಯಿಕೋಡ್ ಸಮೀಪದ ಅಫ್ನು ಎಂಬಾತನೊAದಿಗೆ ತಾ. ೮ ರಂದು ಮಧ್ಯಾಹ್ನ ಕೇರಳದಿಂದ ತನ್ನ ಮಿನಿಕೂಪರ್ ಕಾರ್‌ನಲ್ಲಿ ಹೊರಟು ಸಂಜೆ ೬.೩೦ಕ್ಕೆ ಮೈಸೂರಿನ ಅಶೋಕ ರಸ್ತೆಯ ಚಿನ್ನಾಭರಣ ಅಂಗಡಿಯೊAದಕ್ಕೆ ತೆರಳಿ ಆಭರಣ ಮಾರಾಟ ಮಾಡಿ ರೂ. ೫೦ ಲಕ್ಷ ನಗದು ಪಡೆದು ಹಣವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಕೇರಳದೆಡೆಗೆ ಪ್ರಯಾಣ ಬೆಳೆಸಿದ್ದಾರೆ.

ನಸುಕಿನಲ್ಲಿ ಬಂದ ದುಷ್ಕರ್ಮಿಗಳು

ತಾ. ೯ ರ ನಸುಕಿನ ಜಾವ ೨ ಗಂಟೆ ವೇಳೆಗೆ ತಿತಿಮತಿ ದಾಟಿ ದೇವರಪುರಕ್ಕೆ ಬರುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಲಾರಿಯೊಂದು ಕೆಟ್ಟು ನಿಂತಿತ್ತು. ಈ ಸಂದರ್ಭ ೩ ವಾಹನಗಳಲ್ಲಿ ಬಂದ ಸುಮಾರು ೧೦ ರಿಂದ ೧೫ ಮಂದಿ ಕಾರನ್ನು ಅಡ್ಡಗಟ್ಟಿ, ಹಲ್ಲೆಗೈದು ‘ದುಡ್ಡು ತೆಗಿ, ಜೀವ ಬೇಕಾದರೆ ದುಡ್ಡು ತೆಗಿ’ ಎಂದು ಮಲಯಾಳ ಭಾಷೆಯಲ್ಲಿ ಹೇಳಿದ್ದಾರೆ. ನಂತರ ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ದುಷ್ಕರ್ಮಿಗಳಿಂದ ವಾಹನಕ್ಕೆ ಸ್ಥಳಾಂತರಿಸಿ ಜೊತೆಯಲ್ಲಿದ್ದ ಅಫ್ನುನನ್ನು ಕೂಡ ಮತ್ತೊಂದು ವಾಹನದಲ್ಲಿ ಕರೆದೊಯ್ದು ಮುಖಕ್ಕೆ ಬಟ್ಟೆ ಕಟ್ಟಿ ಹಲ್ಲೆಗೈದಿದ್ದಾರೆ.

ಮಾರ್ಗ ಮಧ್ಯೆ ಬಿಟ್ಟು ಪರಾರಿ

ದುಷ್ಕರ್ಮಿಗಳು ಬಂದಿದ್ದ ಕಾರಿನಲ್ಲಿ ಕರೆದೊಯ್ದು ೩೦ ರಿಂದ ೪೦ ನಿಮಿಷದ ಬಳಿಕ ಇಬ್ಬರನ್ನು ಮಾರ್ಗ ಮಧ್ಯೆ ಇಳಿಸಿ ತೆರಳಿದ್ದಾರೆ. ಮಾರ್ಗ ತಿಳಿಯದೆ ಕಾಲ್ನಡಿಗೆ ಮೂಲಕ ಕೆಲ ದೂರ ತೆರಳಿ ರಸ್ತೆಯಲ್ಲಿ ತೆರಳುತ್ತಿದ್ದ ವಾಹನವನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಕಾರು ಚಾಲಕರೊಬ್ಬರು ಹಾತೂರು ಸಮೀಪ ವಾಹನ ನಿಲ್ಲಿಸಿದ ಸಂದರ್ಭ ವಿಷಯವನ್ನು ಅವರಿಗೆ ಹೇಳಿಕೊಂಡಿದ್ದು, ಅವರು ವೀರಾಜಪೇಟೆ ಠಾಣೆಗೆ ಬಿಟ್ಟಿದ್ದಾರೆ.

ಅನಂತರ ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಘಟನೆ ನಡೆದ ಸ್ಥಳ ದೇವರಪುರ ಎಂದು ಪತ್ತೆಹಚ್ಚಿದ್ದಾರೆ. ಶಂಜ್ಜಾದ್‌ಗೆ ಸೇರಿದ ಕಾರನ್ನು ದುಷ್ಕರ್ಮಿಗಳು ಹಾತೂರು-ಬೈಗೋಡು ಬಳಿಯ ನಿರ್ಜನ ಪ್ರದೇಶದಲ್ಲಿ ಬಿಟ್ಟು ವಾಹನವನ್ನು ಜಖಂಗೊಳಿಸಿ ತೆರಳಿದ್ದಾರೆ. ಕಾರನ್ನು ಗೋಣಿಕೊಪ್ಪ ಪೊಲಿಸರು ವಶಕ್ಕೆ ಪಡೆದಿದ್ದಾರೆ.

೩ ವಿಶೇಷ ತಂಡ

ಈ ಬಗ್ಗೆ ಸ್ಥಳದಲ್ಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪಡೆಯಲಾಗುತ್ತಿದ್ದು, ನಡುರಾತ್ರಿಯ ವೇಳೆ ದೂರುದಾರನ ಹಿಂಬಾಲಿಸಿದ ಕಾರುಗಳು ಎಲ್ಲಿಂದ ಬಂದವು, ಆನೆಚೌಕೂರು ಬಳಿಯ ಗಡಿಯಲ್ಲಿನ ಸಿಸಿ ಕ್ಯಾಮರಾಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೈಸೂರಿನಲ್ಲಿ ಮಾರಾಟ ಮಾಡಿದ ಚಿನ್ನದ ವ್ಯಾಪಾರಿ ಬಳಿಯು ತಂಡ ತೆರಳುತ್ತಿದೆ.

ತನಿಖಾ ತಂಡದಲ್ಲಿ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸಿಪಿಐ ಗೋವಿಂದರಾಜು, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ಗೋಣಿಕೊಪ್ಪ ಉಪನಿರೀಕ್ಷಕಿ ರೂಪದೇವಿ ಬಿರಾದಾರ್, ಸಿಬ್ಬಂದಿಗಳಾದ ಮಂಜುನಾಥ್ ಸೇರಿದಂತೆ ಇತರರು ಇದ್ದಾರೆ.