ಮುಳ್ಳೂರು, ಡಿ. ೯: ಶನಿವಾರಸಂತೆ ಲಯನ್ಸ್ ಕ್ಲಬ್, ಕೃಷಿ ಇಲಾಖೆ, ನಿಡ್ತ ಸರಕಾರಿ ಪ್ರೌಢಶಾಲೆಯ ನಿಸರ್ಗ ಯುಕೋ ಕ್ಲಬ್ ಮತ್ತು ಹಾರೆಹೊಸೂರು ಸರಕಾರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯನ್ನು ಸಮೀಪದ ಹಾರೆಹೊಸೂರು ಗ್ರಾಮದ ಧರ್ಮಪ್ಪ ಅವರ ಕಾಫಿ ತೋಟದಲ್ಲಿ ಆಚರಿಸಲಾಯಿತು.

ಮಣ್ಣಿನ ಆರೋಗ್ಯ ಕುರಿತು ನಿಡ್ತ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಡಿ.ಎಸ್. ಮಧು ಕುಮಾರ್ ಮಾಹಿತಿ ನೀಡಿ, ಅರಣ್ಯ, ಪರಿಸರ ಸಮೃದ್ಧಿ ಸೇರಿದಂತೆ ರೈತರು ಬೆಳೆಯುವ ವಿವಿಧ ಕೃಷಿ ಬೆಳೆಗಳು ಸಮೃದ್ಧಿಯಾಗಲು ಭೂಮಿಯ ಮಣ್ಣು ಪ್ರಮುಖ ಪಾತ್ರವಹಿಸುತ್ತದೆ. ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ಭೂಮಿಯ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದ ಭೂಮಿಯ ಮೇಲಿರುವ ಮರ-ಗಿಡ, ಸಸ್ಯ ಸಂಕುಲ ಸಮೃದ್ಧಿಗೊಳ್ಳುವುದರ ಜೊತೆಯಲ್ಲಿ ರೈತರು ಬೆಳೆಯುವ ವಿವಿಧ ಕೃಷಿ ಬೆಳೆಗಳು ಸಹ ಸಮೃದ್ಧಿಯಾಗಿ ಬೆಳೆಯುತ್ತವೆ ಎಂದರು.

ಶನಿವಾರಸAತೆ ಕೃಷಿ ಅಧಿಕಾರಿ ವೇದಪ್ರಿಯಾ ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಲು ತಮ್ಮ ಜಮೀನುಗಳಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಉತ್ತಮವಾಗಿ ವ್ಯವಸಾಯ ಮಾಡುವಂತೆ ಸಲಹೆ ನೀಡಿದರು.

ದಿನದ ಮಹತ್ವದ ಕುರಿತು ಹಾರೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಂದರ್ ಮಾತನಾಡಿದರು. ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಕಾರ್ಯಪ್ಪ, ಖಜಾಂಚಿ ಬಿ.ಕೆ. ಚಿಣ್ಣಪ್ಪ ಲಯನ್ಸ್ ಸಂಸ್ಥೆಯ ಸಾಮಾಜಿಕ ಸೇವೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರಾದ ಕೇಶವ್, ಧರ್ಮಪ್ಪ, ಬಿ.ಬಿ. ನಾಗರಾಜು, ತೋಟದ ಮಾಲೀಕ ಹಾರೆಹೊಸೂರು ಧರ್ಮಪ್ಪ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.