ಸಂಸದೆ ಉಚ್ಛಾಟನೆ - ಕಲಾಪ ಮುಂದೂಡಿಕೆ
ನವದೆಹಲಿ, ಡಿ. ೮: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ‘ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಲೋಕಸಭೆಯಲ್ಲಿ ನೈತಿಕ ಸಮಿತಿ ವರದಿ ಮಂಡಿಸಿದ ಬೆನ್ನಲ್ಲೇ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಸಂಸದೆ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ವರದಿ ಶಿಫಾರಸು ಮಾಡಿದ್ದು, ಇದೇ ವರದಿಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾಗಿತ್ತು. ಅಂತೆಯೇ ಕೇಂದ್ರ ಸರ್ಕಾರ ಕೂಡ ಮಹುವಾ ಕುರಿತು ನೈತಿಕ ಸಮಿತಿ ವರದಿ ಶಿಫಾರಸ್ಸನ್ನು ಬೆಂಬಲಿಸಿ ಇಂದು ಲೋಕಸಭೆಯಲ್ಲಿ ತನ್ನ ನಿರ್ಣಯ ಮಂಡಿಸಿತು. ಇದರ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರನ್ನು ಸಂಸತ್ತಿನಿAದ ಉಚ್ಛಾಟಿಸಿದ್ದಾರೆ. ಅಲ್ಲದೆ ಸದನವನ್ನು ಡಿಸೆಂಬರ್ ೧೧ಕ್ಕೆ ಮುಂದೂಡಿದ್ದಾರೆ. ಸಂಸದ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಅಸಭ್ಯವಾಗಿದೆ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನ ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದರಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಮೋಯಿತ್ರಾ ಅವರನ್ನು ಉಚ್ಛಾಟಿಸಿದ್ದಾರೆ.
ಈರುಳ್ಳಿ ರಫ್ತಿಗೆ ನಿಷೇಧ
ನವದೆಹಲಿ, ಡಿ. ೮: ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಮತ್ತು ಲಭ್ಯತೆ ಸುಧಾರಿಸಲು ೨೦೨೪ರ ಮಾರ್ಚ್ ೩೧ರವರೆಗೂ ರಫ್ತು ಮಾಡುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದೆ. ಈ ಆದೇಶ ಹೊರಬೀಳುವುದಕ್ಕೂ ಮುನ್ನ ಆಗಿರುವ ರಫ್ತು ಒಪ್ಪಂದಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಚಿಲ್ಲರೆ ಮಾರಾಟದ ದರ ಕೆ.ಜಿಗೆ ರೂ. ೭೦-೮೦ರವರೆಗೆ ಇದೆ. ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈರುಳ್ಳಿ ಬೆಲೆ ಹೆಚ್ಚಿರುವ ರಾಜ್ಯಗಳಲ್ಲಿ ತನ್ನ ಬಳಿ ಇರುವ ಹೆಚ್ಚುವರಿ ದಾಸ್ತಾನನ್ನು ಕೆ.ಜಿಗೆ ರೂ. ೨೫ರಂತೆ ಮಾರಾಟ ಮಾಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ೧ರಿಂದ ಆಗಸ್ಟ್ ೪ರವರೆಗಿನ ಅವಧಿಯಲ್ಲಿ ೯.೭೫ ಲಕ್ಷ ಟನ್ನಷ್ಟು ಈರುಳ್ಳಿ ರಫ್ತು ಮಾಡಲಾಗಿದೆ.
ಮಿಜೋರಾಂನ ಮುಖ್ಯಮಂತ್ರಿಯಾಗಿ ಲಾಲ್ದುಹೋಮಾ
ಐಜ್ವಾಲ್, ಡಿ. ೮: ಝೋರಂ ಪೀಪಲ್ಸ್ ಮೂವ್ಮೆಂಟ್ನ (ಝೆಡ್ ಪಿಎಂ) ಅಧ್ಯಕ್ಷ ಲಾಲ್ದುಹೋಮಾ ಅವರು ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇವರು ಈ ಅತ್ಯುನ್ನತ ಹುದ್ದೆಗೇರಿದ ಕಾಂಗ್ರೆಸ್ ಮತ್ತು ಎಂ.ಎನ್.ಎಫ್.ಯೇತರ ಮೊದಲ ನಾಯಕರಾಗಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಬಾಬು ಕಂಭAಪತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ೧೧ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ೪೦ ಸದಸ್ಯ ಬಲದ ಮಿಜೋರಾಂನಲ್ಲಿ ಝೆಡ್ ಪಿಎಂ ಪಕ್ಷ ೨೭ ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಹುಮತ ಸಾಧಿಸಿದೆ. ಝೆಡ್ ಪಿಎಂ ಶಾಸಕಾಂಗ ಪಕ್ಷದ ನಾಯಕರಾಗಿ ಲಾಲ್ದುಹೋಮ ಆಯ್ಕೆಯಾಗಿದ್ದರು. ಅವರು ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು, ಒಮ್ಮೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೮ ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟಿತ್ತು ಝೆಡ್ ಪಿಎಂ ಪಕ್ಷ, ೨೦೧೯ರ ಚುನಾವಣೆಯಲ್ಲಿ ೮ ಸ್ಥಾನಗಳನ್ನು ಗೆದ್ದಿತ್ತು.
ರಾಮಮಂದಿರದಲ್ಲಿ ಪ್ರ್ರಾಣ ಪ್ರತಿಷ್ಠಾಪನೆಗೆ ಭರದ ಸಿದ್ಧತೆ
ಅಯೋಧ್ಯೆ, ಡಿ. ೮: ಅಯೋಧ್ಯೆಯಲ್ಲಿ ಜನವರಿ ೨೨ರಂದು ನಡೆಯಲಿರುವ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ನಿರ್ಮಾಣ ಕಾರ್ಯ ಯಾವ ಹಂತದಲ್ಲಿದೆ, ಯಾವ ರೀತಿ ನಡೆಯುತ್ತಿದೆ ಎನ್ನುವುದಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ‘ಎಕ್ಸ್’ನಲ್ಲಿ ಫೋಟೊ ಮತ್ತು ವೀಡಿಯೊವನ್ನು ಹಂಚಿಕೊAಡಿದೆ. ಟ್ರಸ್ಟ್ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ನೆಲಮಹಡಿಯಲ್ಲಿರುವ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ದೇವಾಲಯದ ನೆಲಮಹಡಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆಗೆ ಯಾವುದೇ ಸಮಸ್ಯೆಯಿಲ್ಲ. ಕಾರ್ಯಕ್ರಮಕ್ಕೆ ೪ ಸಾವಿರ ಸಾಧುಗಳಿಗೆ ಆಹ್ವಾನ ನೀಡಲಾಗಿದೆ.