ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಡಿ. ೮: ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಿತ್ರರಂಗದ ಹಿರಿಯ ನಟಿ ಲೀಲಾವತಿ (೮೭) ಅವರು ವಿಧಿವಶರಾಗಿದ್ದಾರೆ. ತಮ್ಮ ಸ್ವಗೃಹದಲ್ಲಿ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಇಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
೧೯೩೭ರ ಡಿಸೆಂಬರ್ ೨೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕಡು ಬಡತನದಲ್ಲಿ ಜನಿಸಿದ ಲೀಲಾವತಿ ಅವರು ಬಡತನದ ಕಾರಣದಿಂದಾಗಿಯೇ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಚಿತ್ರರಂಗದೆಡೆಗಿನ ಸೆಳೆತದಿಂದಾಗಿ ನಂತರ ನಟನೆಯನ್ನು ವೃತ್ತಿಯಾಗಿಸಿಕೊಂಡರು.
ಮಹಾಲಿಂಗ ಭಾಗವತರ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯನ್ನು ಮೊದಲು ಸೇರಿದ ಅವರು ಶಂಕರ್ಸಿAಗ್ ನಿರ್ಮಾಣದ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ೧೯೪೯ರಲ್ಲಿ ನಟಿಸಿದ್ದರು, ೧೯೫೮ರಲ್ಲಿ ಸುಬ್ಬಯ್ಯನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ರಾಣಿ ಹೊನ್ನಮ್ಮ’ ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಗಮನಸೆಳೆದ ಮೊದಲ ಚಿತ್ರ ಆಗಿದ್ದು ‘ರಣಧೀರ ಕಂಠೀರವ’ ಅವರಿಗೆ ಅಪಾರ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿತು. ‘ಕಣ್ತೆರೆದು ನೋಡು’, ‘ಗಾಳಿಗೋಪುರ’, ‘ಕನ್ಯಾರತ್ನ’ , ‘ಕುಲವಧು’ ಎಲ್ಲ ಸಿನಿಮಾಗಳಲ್ಲೂ ಅವರ ನಟನೆಯು ಜನರ ಗಮನ ಸೆಳೆದಿತ್ತು. ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್ ಆಗಿದ್ದು ೧೯೫೮ ರಲ್ಲಿ ತೆರೆಕಂಡಿದ್ದ ಭಕ್ತ ‘ಪ್ರಹ್ಲಾದ’ ಅವರ ಮೊದಲ ಚಿತ್ರ ಆಗಿದ್ದರೆ ೨೦೦೯ರಲ್ಲಿ ಬಿಡುಗಡೆಯಾಗಿದ್ದ ‘ಯಾರದು?’ ಅವರ ಕೊನೆಯ ಚಿತ್ರ ಆಗಿದೆ.
ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್ ಕುಮಾರ್ ಅವರೊಂದಿಗೆ ಸುಮಾರು ೩೬ ಚಿತ್ರಗಳಲ್ಲಿ ಅವರು ನಟಿಸಿ ಚಿತ್ರ ರಸಿಕರ ಮನಗೆದ್ದಿದ್ದಾರೆ. ‘ಸಂತ ತುಕಾರಾಂ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ‘ವೀರ ಕೇಸರಿ’ ಮುಂತಾದ ಸಿನಿಮಾ ಸಹಿತ ೫೦ ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದರು. ರಾಜಕುಮಾರ್, ವಿಷ್ಣುವರ್ಧನ್ ಮುಂತಾದ ನಟರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ೬೦೦ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದ್ದರು. ಆ ಕಾಲದಲ್ಲಿ ಡಾ ರಾಜಕುಮಾರ್ ಮತ್ತು ಲೀಲಾವತಿ ಅವರದ್ದು ಚಂದನವನದಲ್ಲಿ ಸೂಪರ್ ಹಿಟ್ ಜೋಡಿ ಎಂದು ಖ್ಯಾತವಾಗಿತ್ತು. ಇವರ ಸೇವೆಗಾಗಿ ೨೦೦೮ ರಲ್ಲಿ ತುಮಕೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿತ್ತು.
೮೭ ವರ್ಷದ ಲೀಲಾವತಿ ಅವರು ಕೆಲವು ದಿನಗಳಿಂದ ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ಯೋಗ ಕ್ಷೇಮ ವಿಚಾರಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಮನೆಗೆ ಭೇಟಿ ನೀಡಿದ್ದರು.
ಇಳಿ ವಯಸ್ಸಿನಲ್ಲಿ ಲೀಲಾವತಿ ಅವರು ನೆಲಮಂಗಲದ ಸೋಲದೇವನಹಳ್ಳಿ ಬಳಿ ಪುತ್ರ ವಿನೋದ್ ರಾಜ್ ಜೊತೆ ವಾಸವಾಗಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿದ್ದ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇವರ ಜೊತೆ ವಿನೋದ್ ರಾಜ್ ಕೂಡ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು. ಆದರೆ ಆಸ್ಪತ್ರೆ ಉದ್ಘಾಟನೆ ಆದ ಕೆಲವೇ ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ. ಇದಲ್ಲದೆ ಕಳೆದ ೨೦೨೨ ರ ಸೆಪ್ಟೆಂಬರ್ ತಿಂಗಳಿನಲ್ಲಿ ಸೋಲದೇವನ ಹಳ್ಳಿಯಲ್ಲಿ ತಮ್ಮ ಖರ್ಚಿನಲ್ಲೇ ಗ್ರಾಮಸ್ಥರ ಅನುಕೂಲಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಕಟ್ಟಿಸಿದ್ದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಉದ್ಘಾಟಿಸಿದ್ದರು.
ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಿನೋದ್ ರಾಜ್ ಮಾಹಿತಿ ನೀಡಿದ್ದಾರೆ.
ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗದಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ಮೃತ ದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ಅವರ ಪಾರ್ಥಿವ ಶರೀರಕ್ಕೆ ಪೂಜಾ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ವಾಪಸ್ಸು ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ. ಶನಿವಾರ ಸಂಜೆ ಲೀಲಾವತಿ ಅವರ ಅಂತ್ಯಕ್ರಿಯೆ ಅವರ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.