ಮಡಿಕೇರಿ, ಡಿ. ೯: ಮಗುವನ್ನು ಕೊಂದು ತಂದೆ-ತಾಯಿ ನೇಣಿಗೆ ಕೊರಳೊಡ್ಡಿದ ಘಟನೆ ಮಡಿಕೇರಿ ಸಮೀಪದ ಕಗ್ಗೋಡ್ಲಿನ ಬಿಳಿಗೇರಿ ರಸ್ತೆಯಲ್ಲಿರುವ ಅರೆಕಾ ರೆಸಾರ್ಟ್ನಲ್ಲಿ ನಡೆದಿದೆ.

ಮೂಲತಃ ಕೇರಳ ರಾಜ್ಯದ ಕೊಲ್ಲಂ ನಿವಾಸಿ ವಿನೋದ್ ಬಾಬುಸೇನಾನ್ (೪೩), ಪತ್ನಿ ಜಿಬಿ ಅಬ್ರಾಹಂ (೩೮) ಹಾಗೂ ಜಾನೇ ಮರಿಯ ಜೇಕಬ್ (೧೧) ಸಾವನ್ನಪ್ಪಿದ ದುರ್ದೈವಿಗಳು.

ಶುಕ್ರವಾರ ಸಂಜೆ ೬ ಗಂಟೆಗೆ ಕ್ರೆಟಾ (ಏಐ- ೨೮-ಈ-೦೦೯೩) ಕಾರ್‌ನಲ್ಲಿ ರೆಸಾರ್ಟ್ಗೆ ಆಗಮಿಸಿ ಪ್ರತ್ಯೇಕ ಕಾಟೇಜ್ ಪಡೆದ ಕುಟುಂಬ ಕೆಲಹೊತ್ತು ವಿಶ್ರಮಿಸಿ ರೆಸಾರ್ಟ್ ಸುತ್ತಮುತ್ತ ಓಡಾಡಿ ಕಾಲಕಳೆದಿದೆ. ಮೂವರು ರೆಸಾರ್ಟ್ಗೆ ಬರುವ ಸಮಯದಲ್ಲಿ ಲವಲವಿಕೆಯಿಂದ ಇದ್ದರು, ಮಗು, ಪತ್ನಿಯೊಂದಿಗೆ ವಿನೋದ್ ಕಾಲ್ನಡಿಗೆಯಲ್ಲಿ ಪಕ್ಕದ ಅಂಗಡಿಗೆ ತೆರಳಿ ಮಗಳಿಗೆ ಚಾಕಲೇಟ್ ಕೊಡಿಸಿ ವಾಪಾಸ್ ಆಗಿ ರಾತ್ರಿ ಊಟ ಮಾಡಿ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳೊAದಿಗೆ ಡೈನಿಂಗ್ ಹಾಲ್‌ನಲ್ಲಿ ಕೇರಂ ಆಡಿದ್ದರು ಎಂದು ರೆಸಾರ್ಟ್ ವ್ಯವಸ್ಥಾಪಕ ಆನಂದ್ ‘ಶಕ್ತಿ’ಗೆ ತಿಳಿಸಿದ್ದಾರೆ.

ರಾತ್ರಿ ರೂಂ ಸೇರಿದ ಕುಟುಂಬ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ‘ಚೆಕ್‌ಔಟ್’ ಆಗುವುದಾಗಿ ತಿಳಿಸಿದ ಮೇರೆ ರೂಂ ಬಾಯ್ ಬೆಳಿಗ್ಗೆ ೧೦ ಗಂಟೆಗೆ ಬಾಗಿಲು ತಟ್ಟಿದ್ದು, ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಕುಟುಂಬ ಹೊರತೆರಳಿರಬಹುದು ಎಂದು ಭಾವಿಸಿ ಅರ್ಧ ಗಂಟೆ ಬಿಟ್ಟು ಮತ್ತೆ ಬಾಗಿಲು ತಟ್ಟಿದ್ದಾರೆ. ಆಗಲೂ ಯಾರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಜೊತೆಗೆ ಮೂವರ ಚಪ್ಪಲಿ ಕಾಟೇಜ್ ಹೊರಭಾಗದಲ್ಲಿದ್ದ ಕಾರಣ ಅನುಮಾನಗೊಂಡ ಸಿಬ್ಬಂದಿಗಳು ಬೆಳಿಗ್ಗೆ ೧೧ ಗಂಟೆಗೆ ಕಿಟಕಿಯ ಮೂಲಕ ನೋಡಿದಾಗ ಪತಿ-ಪತ್ನಿ ನೇಣಿಗೆ ಶರಣಾಗಿರುವುದು, ಮಗು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಸಿಬ್ಬಂದಿಗಳು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತರು ಕುಟುಂಬಸ್ಥರನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿದ್ದಾರೆ. ೪೫೦ ಕಿ.ಮೀ. ದೂರದ ಕೊಲ್ಲಂನಿAದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ.

ಡೆತ್ ನೋಟ್ ಪತ್ತೆ

ಕುಟುಂಬಸ್ಥರ ಒಪ್ಪಿಗೆ ಮೇರೆ ಪೊಲೀಸರು ರೂಂ ಬಾಗಿಲು ತೆರೆದು ನೇಣು ಹಾಕಿಕೊಂಡಿದ್ದ ದಂಪತಿ ಮೃತದೇಹವನ್ನು ಕೆಳಗಿಳಿಸಿ, ಮೂವರ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮಹಜರು ಸಂದರ್ಭ ಮೃತರು ಇಂಗ್ಲೀಷ್ ಭಾಷೆಯಲ್ಲಿ ಬರೆದಿಟ್ಟ ಡೆತ್‌ನೋಟ್ ಪತ್ತೆಯಾಗಿದ್ದು, ಹಣದ ಸಮಸ್ಯೆಯೇ ನಮ್ಮ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಮೃತ ದಂಪತಿ ಕೊಲ್ಲಂ ಸಮೀಪವೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದ್ದು, ಕುಟುಂಬಸ್ಥರ ಆಗಮನದ ಬಳಿಕವಷ್ಟೆ ಸಾವಿನ ಕಾರಣ ಹೊರಬೀಳಬೇಕಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಂದೆ-ತಾಯಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.