ಕುಶಾಲನಗರ, ಡಿ. ೭: ಉಪನ್ಯಾಸಕರ ಕೊರತೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಾಲೇಜು ಆವರಣದಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಪಠ್ಯಗಳಿಗೆ ಉಪನ್ಯಾಸಕರಿಲ್ಲ , ಕಳೆದ ಹಲವು ವರ್ಷಗಳಿಂದಲೂ ಬಿಸಿಎಗೆ ಉಪನ್ಯಾಸಕರ ಕೊರತೆಯಿದ್ದು ಖಾಯಂ ಉಪನ್ಯಾಸಕರನ್ನು ನೇಮಿಸಬೇಕಿದೆ, ತರಗತಿಗಳು ಸರಿಯಾಗಿ ನಡೆಯದೆ ನಾವೇ ಸ್ವತಃ ಪಠ್ಯ ಅಭ್ಯಸಿಸಿ ಪರೀಕ್ಷೆ ಎಸುರಿಸಬೇಕಿದೆ, ಪರೀಕ್ಷೆಯ ವೇಳಾಪಟ್ಟಿಯಲ್ಲಿ ಕೂಡ ಕಲಿಕೆಗೆ ಬಿಡುವು ಕಲ್ಪಿಸಿಲ್ಲ, ಮಂಗಳೂರು ವಿವಿಯಿಂದ ಪ್ರಕಟಿಸುವ ಫಲಿತಾಂಶ ಗೊಂದಲಮಯವಾಗಿದೆ, ಅಂಕಪಟ್ಟಿಯನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಇದೇ ಸಂದರ್ಭ ಸ್ಥಳಕ್ಕಾಗಮಿಸಿದ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು.

ಇದೇ ಸಂದರ್ಭ ಉಪನ್ಯಾಸಕರಿಲ್ಲದ ಬಿಸಿಎ ವಿಭಾಗ ರದ್ದತಿಗೊಳಿಸಲು ವಿದ್ಯಾರ್ಥಿಗಳು ಆಗ್ರಹಿಸಿದರು.

ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಪ್ರವೀಣ್ ಕುಮಾರ್, ಉಪನ್ಯಾಸಕರಾದ ರಮೇಶ್ ಚಂದ್ರಣ ಸುಧಾಕರ್ ಮತ್ತಿತರರು ಇದ್ದರು.