ಕುಶಾಲನಗರ, ಡಿ. ೭: ತಾ. ೨೪ ರಂದು ಕುಶಾಲನಗರದಲ್ಲಿ ನಡೆಯುವ ಹನುಮ ಜಯಂತಿ ಅದ್ದೂರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರಪೇಟೆ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ ಅವರ ಅಧ್ಯಕ್ಷತೆಯಲ್ಲಿ ದಶಮಂಟಪ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಯಿತು.
ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಂಟಪಗಳ ಸಮಿತಿ ಪ್ರಮುಖರಿಂದ ಮಂಟಪಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಕೂಡಿಗೆ, ಗುಡ್ಡೆ ಹೊಸೂರು, ಮಾದಾಪಟ್ಟಣ, ಹೆಚ್.ಆರ್.ಪಿ. ಕಾಲೋನಿ, ಜನತಾ ಕಾಲೋನಿ, ಆಂಜನೇಯ ದೇವಾಲಯ, ಬೈಚನಹಳ್ಳಿ, ಮುಳ್ಳುಸೋಗೆ, ಗೋಪಾಲ ಸರ್ಕಲ್ ಮುಂತಾದ ಕಡೆಗಳಿಂದ ಮಂಟಪಗಳು ಹೊರಡಲಿದ್ದು, ಈ ಸಂದರ್ಭ ಹೆದ್ದಾರಿಯಲ್ಲಿ ತೆರಳುವ ವಾಹನಗಳಿಗೆ ಸಂಚಾರದಲ್ಲಿ ಯಾವುದೇ ರೀತಿಯ ತೊಡಕು ಉಂಟಾಗಬಾರದು, ಮೆರವಣಿಗೆ ಸಂದರ್ಭ ಕಾನೂನು ನಿಯಮಗಳನ್ನು ಉಲ್ಲಂಘಿಸಬಾರದು, ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜನರ ನಡುವೆ ಯಾವುದೇ ಗೊಂದಲ ಉಂಟಾಗಬಾರದು, ರಾತ್ರಿ ಹತ್ತು ಗಂಟೆ ತನಕ ಮಾತ್ರ ಧ್ವನಿವರ್ಧಕ ಬಳಸುವುದು ಮುಂತಾದ ನಿಯಮಗಳ ಬಗ್ಗೆ ಡಿ.ವೈ.ಎಸ್.ಪಿ. ಗಂಗಾಧರಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಮಂಟಪಗಳು ಹೆದ್ದಾರಿಯಲ್ಲಿ ತೆರಳುವ ಸಂದರ್ಭ ವಾಹನ ಸಂಚಾರಗಳಿಗೆ ಅಡ್ಡಿ ಉಂಟಾಗಬಾರದು ಎಂದು ಸಮಿತಿಗಳ ಪ್ರಮುಖರಿಗೆ ಮಾಹಿತಿ ಒದಗಿಸಿದರು. ಮೆರವಣಿಗೆ ಸಂದರ್ಭ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಮಾತನಾಡಿದ ದಶಮಂಟಪ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಮತ್ತು ಮಂಟಪಗಳ ಸಮಿತಿ ಅಧ್ಯಕ್ಷರುಗಳು ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ಬಯಸಿದರು.
ಈ ಸಂದರ್ಭ ಪೊಲೀಸ್ ಅಧಿಕಾರಿಗಳಾದ ರಾಜೇಶ್ ಕೋಟ್ಯಾನ್, ಪ್ರಕಾಶ್ ಮತ್ತು ಠಾಣಾಧಿಕಾರಿಗಳಾದ ಮೋಹನ್ ರಾಜ್, ಕಾಶಿನಾಥ್ ಬಗಲಿ, ಪ್ರಮುಖರಾದ ವಿ.ಪಿ. ಶಶಿಧರ್, ಮಂಜುನಾಥ ಗುಂಡುರಾವ್, ಕೆ.ಎನ್. ದೇವರಾಜ್ ಗಿರೀಶ್, ಜಗದೀಶ್, ಡಿ.ಸಿ. ಮಂಜುನಾಥ್, ರಾಜೇಶ್, ವಸಂತ್, ಸುನಿಲ್, ಗೌರವ ಸಲಹೆಗಾರ ಎಂ.ಎನ್. ಚಂದ್ರಮೋಹನ್, ವಿವಿಧ ಮಂಟಪಗಳ ಸಮಿತಿ ಅಧ್ಯಕ್ಷರು, ಸದಸ್ಯರು ಇದ್ದರು.