ವೀರಾಜಪೇಟೆ, ಡಿ. ೮: ಜೆ.ಎಸ್.ಎಸ್. ಮಹಾವಿದ್ಯಾಪೀಠ, ಜೆ.ಎಸ್.ಎಸ್ ಆಯುರ್ವೇದ ಆಸ್ಪತ್ರೆ ಮೈಸೂರು ಮತ್ತು ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ವೀರಾಜಪೇಟೆ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೈಲ್ಸ್ ದಿನಾಚರಣೆ ಅಂಗವಾಗಿ ದ್ವಿತೀಯ ವರ್ಷದ ಆಯುರ್ವೇದ ಚಿಕಿತ್ಸೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರದ ರೋಟರಿ ಸಭಾಂಗಣದಲ್ಲಿ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ಬನ್ಸಿ ಪೂವಣ್ಣ ಮತ್ತು ಲಯನ್ಸ್ ಕ್ಲಬ್ನ ಅಧ್ಯಕ್ಷ ಕರ್ಣಂಡ ಯು. ಜಯ ಹಾಗೂ ಜೆ.ಎಸ್.ಎಸ್. ಆಯುರ್ವೇದ ಕಾಲೇಜಿನ ಉಪ ಪ್ರಾಧ್ಯಾಪಕ ಡಾ. ಅಯ್ಯಣ್ಣ ಅವರು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಲಯನ್ಸ್ ಕ್ಲಬ್ನ ಅಧ್ಯಕ್ಷ ಕರ್ಣಂಡ ಯು. ಜಯ ಅವರು, ಆಯುರ್ವೇದವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ವರ್ಷಗಳಿಂದ ರೋಟರಿ ಮತ್ತು ಲಯನ್ಸ್ ಸಂಸ್ಥೆಗಳು, ಜೆ.ಎಸ್.ಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಭಾಗಿತ್ವದೊಂದಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಿಕೊಂಡು ಬಂದಿವೆ. ಆಯುರ್ವೇದ ಚಿಕಿತ್ಸೆ ಪ್ರಕೃತಿದತ್ತವಾದ ಗಿಡಮೂಲಿಕೆಗಳಿಂದ ತಯಾರಿಸುವ ಜೌಷಧಿಗಳಿಂದ ನೀಡುವುದಾಗಿದೆ ಎಂದರು.
ಉಚಿತ ಆರೋಗ್ಯ ತಪಾಸಣೆಯಲ್ಲಿ ರೋಟರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸುಮಾರು ೧೦೦ಕ್ಕೂ ಅಧಿಕ ಮಂದಿ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬೆನ್ನುಮೂಳೆ ಚಿಕಿತ್ಸೆ, ಮೂಲವ್ಯಾದಿ, ಚರ್ಮರೋಗಗಳು, ಮೂತ್ರಕೋಶದ ಸೋಂಕು, ಉರಿಮೂತ್ರ, ಹರ್ನೀಯ, ಪಿತ್ತಕೋಶದ ಕಲ್ಲು, ಅಪೆಂಡಿಸಾಯಿಟಿಸ್ ಮುಂತಾದ ವ್ಯಾದಿಗಳಿಗೆ ಸಲಹೆ ಮತ್ತು ವಿಶೇಷ ಚಿಕಿತ್ಸೆಯನ್ನು ನೀಡಲಾಯಿತು. ಲಯನ್ಸ್ ಕ್ಲಬ್ ವೀರಾಜಪೇಟೆ ಶಾಖೆಯ ಕಾರ್ಯದರ್ಶಿ ಪಟ್ಟಡ ವಿಕ್ರಂ, ಕೋಶಾಧಿಕಾರಿ ನಿಯಾಜ್ ಕೆ.ಪಿ, ರೋಟರಿ ಕ್ಲಬ್ ವೀರಾಜಪೇಟೆ ಶಾಖೆಯ ಕಾರ್ಯದರ್ಶಿ ಬಿ.ಬಿ. ಮಾದಪ್ಪ, ಸದಸ್ಯೆ ದೀನಾ ಪೂವಣ್ಣ, ರೋಟರಿ ಶಾಲೆ ಪ್ರಾಂಶುಪಾಲೆ ವಿಶಾಲಕ್ಷೀ, ಜೆ.ಎಸ್.ಎಸ್. ಮಹಾವಿದ್ಯಾಪೀಠ, ಜೆ.ಎಸ್.ಎಸ್. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಡಾ. ಪೂರ್ಣಿಮಾ, ಡಾ. ರವೀಂದ್ರ, ಡಾ. ಸುಶ್ಮೀತಾ, ಡಾ. ಮೇಘನ, ಡಾ. ರಾಘವೇಂದ್ರ ಮತ್ತು ಡಾ. ರೋಹಿತ್ ಅವರು ಸೇರಿದಂತೆ ಒಟ್ಟು ೧೮ ಮಂದಿ ತಜ್ಞ ವೈದ್ಯರುಗಳು, ಉಭಯ ಸಂಸ್ಥೆಗಳ ಸದಸ್ಯರು ಶಿಬಿರದಲ್ಲಿ ಹಾಜರಿದ್ದರು.