ಚೆಯ್ಯಂಡಾಣೆ, ಡಿ. ೮: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ.
ಈ ಶಾಲೆಯಲ್ಲಿ ೧ ರಿಂದ ೭ ತರಗತಿವರೆಗೆ ೬೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮಾಂತರ ಭಾಗದ ಕೂಲಿ ಕೆಲಸ ಮಾಡಿ ದಿನ ನಿತ್ಯದ ವೇತನ ಪಡೆದು ಜೀವನ ಸಾಗಿಸುವ ಕುಟುಂಬದ ವಿದ್ಯಾರ್ಥಿಗಳು ಇದೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇಂದಿನ ಆಂಗ್ಲ ಮಾಧ್ಯಮ ಶಾಲೆಯ ವ್ಯಾಮೋಹದ ನಡುವೆಯೂ ೮೫ ರಷ್ಟು ವಿದ್ಯಾರ್ಥಿಗಳನ್ನು ತನ್ನೆಡೆ ಸೆಳೆದು ಕಾರ್ಯಾಚರಿಸುತ್ತಿರುವ ಚೆಯ್ಯಂಡಾಣೆ ಶಾಲೆಯ ಕಟ್ಟಡ ದುಸ್ಥಿತಿಯಲ್ಲಿದೆ. ಸರಿ ಸುಮಾರು ೧೩೦ ವರ್ಷ ಪೂರೈಸಿರುವ ಶಾಲೆ ಇದು. ಈ ಶಾಲೆಗೆ ಒಂದು ಉತ್ತಮವಾದ ಕಟ್ಟಡ ನಿರ್ಮಾಣ ವಾಗಬೇಕಿದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕೊಠಡಿಗಳ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವಂತಿದೆ. ಈ ಕೊಠಡಿಗಳು ಕುಸಿದು ಬೀಳುವ ಆತಂಕದ ನಡುವೆಯೇ ಶಿಕ್ಷಕರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ.
ಈ ಶಾಲೆಯ ದುಸ್ಥಿತಿ ಬಗ್ಗೆ ಕಳೆದ ೩-೪ ವರ್ಷಗಳಿಂದಲೂ ಮಕ್ಕಳು ಹಾಗೂ ಶಿಕ್ಷಕರು, ಈ ಭಾಗದ ಪೋಷಕರು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರೂ ಈ ವಿಚಾರವಾಗಿ ಈ ಶಾಲೆಯನ್ನು ನಿರ್ಲಕ್ಷಿಸುತ್ತಿರುವುದು ಶಾಲೆಯ ದುಸ್ಥಿತಿ ನೋಡಿದರೆ ತಿಳಿಯುತ್ತದೆ.
ಶಾಲೆಯಲ್ಲಿ ೨೪ ಬಾಲಕರು ಹಾಗೂ ೩೬ ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಒಟ್ಟು ೫ ಜನ ಶಿಕ್ಷಕರಿದ್ದು ಅದರಲ್ಲಿ ಒಬ್ಬರು ಅತಿಥಿ ಶಿಕ್ಷಕರಾಗಿದ್ದಾರೆ. ಶಾಲಾ ಆವರಣದಲ್ಲಿ ಒಟ್ಟು ೫ ಶಾಲಾ ಕೊಠಡಿಗಳಿವೆ. ೧ ಕಾರ್ಯಕ್ರಮ ಸಭಾಂಗಣ ಹಾಗೂ ಮುಖ್ಯ ಶಿಕ್ಷಕರ ಕೊಠಡಿ ಕೂಡ ಇದೆ.
ಸಂಪೂರ್ಣ ಶಿಥಿಲಗೊಂಡ ಮುಖ್ಯ ಶಿಕ್ಷಕರ ಕೊಠಡಿಗಳು ಯಾವುದೇ ಕ್ಷಣದಲ್ಲಿಯೂ ಕುಸಿದು ಬೀಳುವಂತಿದೆ. ಶಿಥಿಲಗೊಂಡ ಈ ಹಳೆ ಕಟ್ಟಡ, ಶಾಲಾ ಆವರಣದ ಎಡಭಾಗದಲ್ಲಿ ಇದ್ದು, ಶಾಲಾ ಮಕ್ಕಳು ಪ್ರತಿನಿತ್ಯ ಕಟ್ಟಡದ ಹೊರಾಂಗಣದಲ್ಲಿ ಆಟ ವಾಡುತ್ತಾರೆ. ಆ ವೇಳೆ ಕಟ್ಟಡ ಕುಸಿದು ಬಿದ್ದರೆ ದೊಡ್ಡ ಅನಾಹುತ ವಾಗುತ್ತದೆ. ಇದರ ಬಗ್ಗೆ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಹಲವು ಬಾರಿ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಶಾಲೆಯ ಸ್ಥಿತಿಯ ಬಗ್ಗೆ ೩-೪ ವರ್ಷಗಳ ಹಿಂದಿನಿAದಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.
ಎಲ್ಲರೂ ಭರವಸೆ ನೀಡುವುದರಲ್ಲೇ ಕಾಲ ಕಳೆದಿದ್ದಾರೆ.
ಸಂಪೂರ್ಣ ಶಿಥಿಲಗೊಂಡ ಕಟ್ಟಡದ ಕೊಠಡಿಗಳನ್ನು ದುರಸ್ತಿ ಪಡಿಸಲು ಹಲವಾರು ಬಾರಿ ಸಂಬAಧಪಟ್ಟ ಅಧಿಕಾರಿಗಳಿಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಮತ್ತು ಗ್ರಾಮಸ್ಥರು ಭೇಟಿ ನೀಡಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸತ್ಯ.
- ಅಶ್ರಫ್, ೯೬೧೧೫೨೧೩೫೩