ಅನಿಲ್ ಎಚ್.ಟಿ.
ಮಡಿಕೇರಿ, ಡಿ.೭ : ಹಾಲಿವುಡ್ನ ಖ್ಯಾತ ತಾರಾ ದಂಪತಿ ಮೈಕಲ್ ಡೋಗ್ಲಸ್ ಮತ್ತು ಕ್ಯಾತರಿನ್ ಝೀಟಾ ತಮ್ಮ ಪುತ್ರ ದಿಲನ್ ಜತೆ ಮಡಿಕೇರಿಯಲ್ಲಿದ್ದಾರೆ. ವಿಶ್ವ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಯನ್ನು ದಾಖಲೆಯ ಎರಡು ಬಾರಿ ಪಡೆದಿರುವ ೭೯ ವರ್ಷದ ಮೈಕಲ್ ಡೋಗ್ಲಸ್ ತನ್ನ ಪತ್ನಿ ನಟಿ ಕ್ಯಾತರಿನ್ ಜತೆ ಕೊಡಗು ಪ್ರವಾಸದಲ್ಲಿದ್ದಾರೆ.
ಕಳೆದ ತಿಂಗಳು ಗೋವಾದಲ್ಲಿ ನಡೆದ ಭಾರತೀಯ ಚಿತ್ರೋತ್ಸವಕ್ಕೆ ಬಂದಿರುವ ಈ ತಾರಾ ದಂಪತಿ ಅಲ್ಲಿಂದ ದಕ್ಷಿಣ ಭಾರತದ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಇದೀಗ ಕೊಡಗಿಗೆ ಬಂದಿದ್ದಾರೆ. ಭಾರತದ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆಗಾಗಿನ ಪ್ರಶಸ್ತಿಯನ್ನು ಗೋವಾ ಚಿತ್ರೋತ್ಸವ ಸಂದರ್ಭ ಮೈಕಲ್ ಡೋಗ್ಲಸ್ ಸ್ವೀಕರಿಸಿದರು.
ಬುಧವಾರ ಸಂಜೆ ಮಡಿಕೇರಿ ಹೊರವಲಯದಲ್ಲಿನ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ಗೆ ಭೇಟಿ ನೀಡಿದ ತಾರಾ ದಂಪತಿ ಕೆಲಹೊತ್ತು ಈ ಗಾಲ್ಫ್ ಮೈದಾನದಲ್ಲಿ ಗಾಲ್ಫ್ ಕ್ರೀಡೆಯಾಡಿದ್ದಾರೆ. ಇವರನ್ನು ಗಾಲ್ಫ್ ಕ್ಲಬ್ ಅಧ್ಯಕ್ಷ ಐಚೆಟ್ಟೀರ ಅನಿಲ್ ಮತ್ತು ಸದಸ್ಯ ಕೆ.ಯು. ಸುಬ್ಬಯ್ಯ ಕೊಡಗಿಗೆ ಸ್ವಾಗತಿಸಿದರು. ಕೊಡಗಿನ ಸ್ವಾದಿಷ್ಟ ಕಾಫಿಯನ್ನೂ ಸವಿದ ದಂಪತಿ ನಂತರ ಖಾಸಗಿ ರೆಸಾರ್ಟ್ಗೆ ತೆರಳಿದರು.
ಅಮೇರಿಕಾ ಮೂಲದ ಮೈಕಲ್ ಡೋಗ್ಲಸ್ ಹಾಲಿವುಡ್ನಲ್ಲಿ ಅತ್ಯಂತ ಜನಪ್ರಿಯ ಕಲಾವಿದ ಮತ್ತು ಸಿನಿಮಾ ನಿರ್ಮಾಪಕರಾಗಿದ್ದಾರೆ. ದಿ ಚೈನಾ ಸಿಂಡ್ರೋಮ್, ರೋಸ್ ಇನ್ ದಿ ಸ್ಟೋನ್, ದಿ ಅಮೇರಿಕನ್ ಪ್ರೆಸಿಡೆಂಟ್ ದಿ ವಾರ್ ಆಫ್ ರೋಸಸ್, ದಿ ಗೇಮ್, ಟ್ರಾಫಿಕ್, ವಂಡರ್ ಬಾಯ್, ಬೇಸಿಕ್ ಇನ್ಸ್ಟಿಂಕ್ಟ್ ವಾಲ್ ಸ್ಟಿçÃಟ್, ದಿ ಫೇಟಲ್ ಅಟ್ರಾಕ್ಷನ್ನಂಥ ಜಗತ್ತಿನ ಪ್ರಸಿದ್ಧ ಚಿತ್ರಗಳೂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಮೈಕಲ್ ನಾಯಕನಾಗಿ ನಟಿಸಿ ಸಿನಿಮಾ ಪ್ರೇಮಿಗಳ ಮನಗೆದ್ದಿದ್ದಾರೆ. ನೂರಕ್ಕೂ ಅಧಿಕ ಪ್ರಶಸ್ತಿಗಳು ಉತ್ತಮ ನಟನೆಗಾಗಿ ಇವರಿಗೆ ಸಂದಿವೆ. ವಿಶೇಷವಾಗಿ ಜಗತ್ತಿನ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ, ಎರಡು ಬಾರಿ ಹಾಲಿವುಡ್ನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗಳು ಮೈಕಲ್ಗೆ ದೊರಕಿದೆ.
ಮೊದಲ ಪತ್ನಿಗೆ ವಿಚ್ಚೇದನ ನೀಡಿ ೨೦೦೦ನೇ ವರ್ಷದಲ್ಲಿ ಮತ್ತೋರ್ವ ಹೆಸರಾಂತ ನಾಯಕಿ ನಟಿ ಕ್ಯಾತರಿನ್ ಅವರನ್ನು ಮೈಕಲ್ ವಿವಾಹವಾದರು. ಬ್ರಿಟಿಷ್ ಅಕಾಡೆಮಿ ಪ್ರಶಸ್ತಿಯೊಂದಿಗೆ ಪ್ರತಿಷ್ಠಿತ ಟೋಮಿ ಪ್ರಶಸ್ತಿಯನ್ನು ಕೂಡ ಕ್ಯಾತರಿನ್ ಪಡೆದಿದ್ದಾರೆ.
೩೫೦ ಮಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮೈಕಲ್ ಈ ಮೂಲಕ ಜಗತ್ತಿನ ಅತ್ಯಂತ ಶ್ರೀಮಂತ ಕಲಾವಿದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಚಿತ್ರನಟನೆ, ಚಿತ್ರಗಳ ನಿರ್ಮಾಣದೊಂದಿಗೆ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿಯೂ ಈ ದಂಪತಿ ಸಕ್ರಿಯರಾಗಿದ್ದಾರೆ. ಶುಕ್ರವಾರ ಮೈಕಲ್ ದಂಪತಿ ಕೊಡಗಿನಿಂದ ಮೈಸೂರಿಗೆ ತೆರಳಲಿದ್ದಾರೆ.