ಮಡಿಕೇರಿ, ಡಿ. ೬: ಮಡಿಕೇರಿ ದಸರಾ ಉತ್ಸವ ಆಚರಣೆಯಾಗಿ ನಲವತ್ತು ದಿನಗಳು ಕಳೆದರೂ ಇನ್ನೂ ಕೂಡ ದಶಮಂಟಪಗಳು, ಉಪಸಮಿತಿಗಳಿಗೆ, ಕಲಾವಿದರಿಗೆ ಯಾವದೇ ಹಣ ಪಾವತಿಯಾಗಿಲ್ಲ. ಈ ನಡುವೆ ಯುವ ಜನರ ಮನರಂಜನೆಗಾಗಿ ಆಯೋಜಿಸಿದ್ದ ಯುವ ದಸರಾ ಸಮಿತಿಗೂ ಒಂದು ರೂಪಾಯಿ ಕೂಡ ಹಣ ನೀಡಿಲ್ಲ.
ಈ ಹಿಂದೆ ಯುವ ದಸರಾ ಆಚರಣೆಗೆಂದು ದಸರಾ ಸಮಿತಿಯಿಂದ ಯುವ ದಸರಾ ಸಮಿತಿಗೆ ರೂ. ಒಂದು ಲಕ್ಷ ಹಣ ನೀಡಲಾಗುತ್ತಿತ್ತು. ಇನ್ನುಳಿದ ಹಣವನ್ನು ಯುವ ದಸರಾ ಸಮಿತಿಯವರು ದಾನಿಗಳಿಂದ ಸಂಗ್ರಹ ಮಾಡಿ ದಸರಾ ಮಾಡುತ್ತಿದ್ದರು. ಈ ಬಾರಿ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ಅಧ್ಯಕ್ಷತೆಯ ಸಮಿತಿ ಅದ್ದೂರಿಯಾಗಿ ಆಚರಿಸಿದೆ. ಈ ಆಚರಣೆಗೆ ದಸರಾ ಸಮಿತಿಯಿಂದ ಒಂದು ಲಕ್ಷ ನೀಡುವದಾಗಿ ಹೇಳಲಾಗಿತ್ತು. ಐವತ್ತು ಸಾವಿರ ಮುಂಗಡ ನೀಡುವದಾಗಿಯೂ ಭರವಸೆ ನೀಡಿತ್ತು. ಆದರೆ, ಇದುವರೆಗೆ ಒಂದು ರೂಪಾಯಿ ಕೂಡ ನೀಡಿಲ್ಲವೆಂದು ಸಮಿತಿ ಅಧ್ಯಕ್ಷ ಕವನ್ ಅಸಮಾಧಾನ ಹೊರಗೆಡಹಿದ್ದಾರೆ.
ಗೋಣಿಕೊಪ್ಪದ ಬಿಲ್
ಈ ನಡುವೆ ಗೋಣಿಕೊಪ್ಪ ದಸರಾದಲ್ಲಿ ಕಾರ್ಯಕ್ರಮ ನೀಡಿದ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರೂ. ೭.೫೦ ಲಕ್ಷ ಸಂಭಾವನೆ ಪಾವತಿ ಮಾಡಲಾಗಿದೆ. ಮಡಿಕೇರಿ ಯುವ ದಸರಾದಲ್ಲಿ ನೀಡಿದ ಕಾರ್ಯಕ್ರಮಕ್ಕೆ ಯುವ ದಸರಾ ಸಮಿತಿಯವರೇ ಹಣ ಪಾವತಿ ಮಾಡಿದ್ದಾರೆ.