ಗೋಣಿಕೊಪ್ಪಲು, ಡಿ. ೬: ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ದ.ಕೊಡಗಿನ ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೭ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಅಂಗವಾಗಿ ಸಂವಿಧಾನ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ ಶೋಷಿತ ಸಮುದಾಯದ ಧ್ವನಿಯಾಗಿ ಅಂಬೇಡ್ಕರ್ ಕೆಲಸ ನಿರ್ವಹಿಸಿದ್ದಾರೆ. ಗಿರಿಜನರು ಶಿಕ್ಷಣಕ್ಕೆ ಒತ್ತು ನೀಡಬೇಕು ಸರ್ಕಾರದ ವತಿಯಿಂದ ಸಿಗುವ ಪ್ರಯೋಜನಗಳನ್ನು ಪಡೆಯುವ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ವಿಶೇಷ ಗಮನ ಹರಿಸಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅಮ್ಮುಣಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ವಕೀಲ ಕಾಶಿಯಪ್ಪ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನಲ್ಲಿ ನ್ಯಾಯ ಸಿಗಲು ಸಂವಿಧಾನ ಅವಕಾಶ ಕಲ್ಪಿಸಿದೆ ಎಂದರು. ಸಾಹಿತಿ ಜಗದೀಶ್ ಜೋಡುಬೀಟಿ, ಎಲ್ಲರೂ ಸಮಾನವಾಗಿ ಜೀವನ ಸಾಗಿಸಲು ಅಂಬೇಡ್ಕರ್ ಬರೆದಿರುವ ಸಂವಿಧಾನವೇ ಕಾರಣವಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕರಾದ ವನಿತ್ ಕುಮಾರ್ ಮಾತನಾಡಿ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡಸಿದ್ದರು. ಅಂದು ಅವರು ಬರೆದ ಸಂವಿಧಾನ ಇಂದಿಗೂ ಭಾರತ ದೇಶದಲ್ಲಿ ಮುಂದುವರೆಯುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಉತ್ತಮ ಬದುಕನ್ನು ಕಂಡುಕೊಳ್ಳಬೇಕು. ಶಿಕ್ಷಣದಿಂದ ಎಲ್ಲವನ್ನು ಸಾಧಿಸುವ ಅವಕಾಶವಿದೆ. ಹಾಗಾಗಿ ಅಂಬೇಡ್ಕರ್ ತಮ್ಮ ಜೀವನದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಿದ್ದರು ಎಂದು ವಿವರಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಬಿ.ಮುರುಗ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಖಜಾಂಜಿ ಹೆಚ್.ಎನ್.ಕುಮಾರ್ ಮಹಾದೇವ್, ಪಾಲಿಬೆಟ್ಟದ ನಾಸೀರ್, ನಿಟ್ಟೂರು ಗ್ರಾಮ ಸಂಚಾಲಕ ವಿಜಯ, ಬೆಂಡೆಕುತ್ತಿ ಪೈಸಾರಿಯ ಕಾಳ, ಹುಡ್ಕ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಸಂವಿಧಾನ ಪೀಠಿಕೆಯನ್ನು ಓದಿದರು. ಜಿಲ್ಲಾ ಖಜಾಂಜಿ ಕುಮಾರ್ ಮಹಾದೇವ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.